ಬೆಂಗಳೂರು: ಕೋವಿಡ್ 2ನೇ ಅಲೆ ಅಬ್ಬರಕ್ಕೆ ಎಲ್ಲ ಹಂತದ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿ ಬದಲಾಗಿಸಲಾಗಿತ್ತು. ಆಗ ವೈರಸ್ ನಿಯಂತ್ರಣಕ್ಕೆ ಪಣತೊಟ್ಟ ಎಲ್ಲಾ ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇತ್ತ ಅನ್ಯ ರೋಗಿಗಳ ಚಿಕಿತ್ಸೆ ಮತ್ತು ಉಪಚಾರ ಕಡೆಗಣಿಸಿರುವ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಿತ್ತು. ಅದಕ್ಕೀಗ ಪರಿಹಾರ ದೊರೆತಂತಾಗಿದೆ.
ಕೊರೊನಾ ಅಲೆ ನಿಯಂತ್ರಣಕ್ಕೆ ಬಂದಿರುವುದರಿಂದ ಎಲ್ಲಾ ಸರ್ಕಾರಿ ಚಿಕಿತ್ಸಾ ಸಂಸ್ಥೆಗಳಾದ ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ 19 ಹೊರತಾದ ಇತರೆ ರೋಗಿಗಳ ಸಾಮಾನ್ಯ, ದ್ವಿತೀಯ, ತೃತೀಯ ಹಾಗೂ ತೀವ್ರ ಚಿಕಿತ್ಸೆಗಳನ್ನು ಈ ಕ್ಷಣದಿಂದ ಪ್ರಾರಂಭಿಸಲು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.
ಕೋವಿಡ್ ನೆಪವೊಡ್ಡಿ ಖಾಸಗಿ ಆಸ್ಪತ್ರೆಗೆ ಕಳಿಸುವಂತಿಲ್ಲ:
ಕೊರೊನಾ ಕಾರಣವೊಡ್ಡಿ ಇತರೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶಿಸುವುದನ್ನು ಪ್ರತಿಬಂಧಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳಿಂದ ಪ್ರಾರಂಭಿಸಿ ಇತರೆ ಎಲ್ಲಾ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗಳು ಮಾಡುವಂತೆ ಸೂಚಿಸಲಾಗಿದೆ. ಇನ್ನು ನೆರೆಹೊರೆ ರಾಜ್ಯಗಳಲ್ಲಿ ಕೋವಿಡ್ ಸೋಂಕು ಏರುಪೇರಾಗುತ್ತಿದ್ದು, ಸೋಂಕಿನ ಬಗ್ಗೆ ಮುಂಜಾಗೃತೆ ವಹಿಸುವಂತೆ ಸೂಚಿಸಲಾಗಿದೆ.
ಹಾಗೆಯೇ ಕೋವಿಡ್ ಆರೈಕೆ/ ಚಿಕಿತ್ಸೆ ವ್ಯವಸ್ಥೆಯನ್ನು ಮುಂದೆ ತಿಳಿಸುವವರೆಗೂ ಮಧ್ಯಮ ಹಂತದಲ್ಲಿ ಉಳಿಸಿಕೊಂಡಿರುವಂತೆ ಸೂಚಿಸಿದೆ. ಒಂದು ವೇಳೆ ಕೊರೊನಾ ಸೋಂಕು ಮತ್ತೆ ವ್ಯಾಪಕವಾದ್ರೆ ಅಲ್ಪ ಸಮಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುಲು ಆಸ್ಪತ್ರೆಗಳಲ್ಲಿ ಎಲ್ಲ ಸಿದ್ಧತೆ ಇರಬೇಕು. ಸೋಂಕಿತರು ಮತ್ತು ಕೋವಿಡೇತರ ರೋಗಿಗಳ ಆಗಮನ, ನಿರ್ಗಮನ ಪ್ರಯೋಗಾಲಯ ಪರೀಕ್ಷೆ, ಆರೈಕೆ, ಚಿಕಿತ್ಸೆ ಮತ್ತು ಸಲಹೆ ಕಾರ್ಯಾಚರಣೆಗಳನ್ನು ಪ್ರತ್ಯೇಕವಾಗಿರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಓದಿ:ಎಸ್ಸೆಸ್ಸೆಲ್ಲಿ ಪರೀಕ್ಷೆ ಕೆಟ್ಟ ನಿರ್ಧಾರ ಎಂದವರೀಗ ದಿಟ್ಟ ನಿರ್ಧಾರ ಅಂತಿದ್ದಾರೆ: ಸಚಿವ ಸುರೇಶ್ ಕುಮಾರ್