ಕರ್ನಾಟಕ

karnataka

ETV Bharat / state

ರೈತರಿಗೆ ಸಿಹಿ ಸುದ್ದಿ: ಇನ್ಮುಂದೆ ಬೆಳೆ ವಿಮೆಗೆ ನಾಮಿನಿ ಕಡ್ಡಾಯ

ಇನ್ನು ಮುಂದೆ ವಿಮಾ ಕಂಪನಿಗಳು ರೈತರಿಂದ ವಿಮೆ ಮಾಡಿಸಿಕೊಳ್ಳುವಾಗ ನಾಮಿನಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.

bc patil
ಸಚಿವ ಬಿ.ಸಿ.ಪಾಟೀಲ್ ಸೂಚನೆ

By

Published : Jul 20, 2021, 5:40 PM IST

ಬೆಂಗಳೂರು:ರೈತರಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಬೆಳೆ‌ ವಿಮೆ ಮಾಡಿಸಿಕೊಳ್ಳುವ ವಿಮಾ‌ ಕಂಪನಿಗಳು ಬೆಳೆವಿಮೆ ಮಾಡಿಸಿಕೊಳ್ಳುವಾಗ ವಿಮೆ ಮಾಡಿಸುವ ರೈತನ ಜೊತೆ ಸಂಬಂಧಿಸಿದ ಕುಟುಂಬದ ನಾಮಿನಿಯನ್ನು ಸಹ ಮಾಡಿಸಿಕೊಳ್ಳಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ ನೀಡಿದ್ದಾರೆ.

ವಿಕಾಸಸೌಧದ ಇಂದು ಬೆಳೆ ವಿಮೆ ಸಂಬಂಧ ಕೃಷಿ ಹಾಗೂ ತೋಟಗಾರಿಕಾ ಇಲಾಖಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಇಷ್ಟು ದಿನಗಳ ಕಾಲ ಬೆಳೆವಿಮೆ ಮಾಡಿಸಿಕೊಳ್ಳುವಾಗ ವಿಮಾ ಕಂಪನಿಗಳು ನಾಮಿನಿಯನ್ನು ಪರಿಗಣಿಸುತ್ತಿರಲಿಲ್ಲ. ಇದರಿಂದ ವಿಮಾದಾರ ರೈತ ಮೃತಪಟ್ಟಲ್ಲಿ ವಿಮೆ ಕಂತು ಪಡೆಯಲು ತೊಂದರೆಯಾಗುತ್ತಿತ್ತು. ಹೀಗಾಗಿ ಕೃಷಿ ಸಚಿವರು ರೈತರ ಅನುಕೂಲಕ್ಕಾಗಿ ಕಂಪನಿಗೆ ಈ ಸೂಚನೆ ಕೊಟ್ಟಿದ್ದಾರೆ.

ಅಲ್ಲದೇ ಫಸಲ್ ಬೀಮಾ ಯೋಜನೆ ಮಾಡಿಕೊಳ್ಳುವ ವಿಮಾ ಕಂಪನಿಗಳು ಕೃಷಿ ಇಲಾಖೆಯಲ್ಲಿ ಕಚೇರಿ ಮಾಡಿಕೊಳ್ಳದೇ ಈ ಹಿಂದೆ ಸೂಚಿಸಿದಂತೆ ಪ್ರತಿ ತಾಲೂಕಿನಲ್ಲಿ ಪ್ರತ್ಯೇಕ ಕಚೇರಿ ತೆರೆಯಬೇಕು. ಅಲ್ಲದೇ ಕಚೇರಿ ತೆರೆದ ಲೊಕೇಷನ್ ಜಿಪಿಎಸ್ ಲಿಂಕ್ ಅನ್ನು ಕೃಷಿ ಇಲಾಖೆಗೆ ನೀಡಬೇಕು ಎಂದು ಹೇಳಿದರು.

ರೈತರು ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟನ್ನೇ ಆಧಾರ್ ಕಾರ್ಡ್‌ಗೆ ಜೋಡಿಸಿ ಆಧಾರ್‌ ಕಾರ್ಡಿನಲ್ಲಿರುವ ಚಾಲಿತ ಬ್ಯಾಂಕ್ ಅಕೌಂಟ್ ಅನ್ನೇ ಬೆಳೆ ವಿಮೆಗೆ ದಾಖಲಿಸಬೇಕು. ಕೆಲವೆಡೆ ಬಹುತೇಕ ರೈತರ ಆಧಾರ್ ಕಾರ್ಡ್ ಬೆಳೆವಿಮೆಗೆ ಜೋಡಣೆಯಾದರೂ ಕೂಡ ಆಧಾರ್‌ಕಾರ್ಡ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿ ಇಲ್ಲ. ಹೀಗೆ ಚಾಲ್ತಿಯಲ್ಲಿರದ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ಗೆ ಜೋಡಿಸಿರುವುದು ಕಂಡುಬಂದಿದೆ. ಇದರಿಂದ ಬಹುತೇಕ ಕಡೆ ಬೆಳೆವಿಮೆ ಪಡೆಯಲು ರೈತರಿಗೆ ತೊಂದರೆಯುಂಟಾಗಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಸಚಿವ ಬಿ.ಸಿ.ಪಾಟೀಲ್ ಸಭೆ

ರೈತರು ಎಷ್ಟೇ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ ಕೂಡ ಆಧಾರ್ ಕಾರ್ಡಿಗೆ ಜೋಡಿಸಿ ಬೆಳೆವಿಮೆಗೆ ನಮೂದಿಸಿರುವ ಬ್ಯಾಂಕ್ ಖಾತೆ ಚಾಲ್ತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಬೇಕು. ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನೇ ರೈತರು ಬೆಳೆವಿಮೆಗೆ ನಮೂದಿಸಬೇಕು. ಆಧಾರ್ ಕಾರ್ಡನ್ನು ಕುಟುಂಬದ ಸದಸ್ಯರು ಒಟ್ಟೊಟ್ಟಿಗೆ ಮಾಡಿಸುವಾಗ ಕೆಲವೆಡೆ ಬೆರಳಚ್ಚು ತಪ್ಪಾಗಿ ನಮೂದಾಗಿರುವ ತೊಂದರೆಯೂ ಸಹ ಆಧಾರ್‌ಕಾರ್ಡಿನಲ್ಲಿ ಕಂಡುಬಂದಿದೆ. ಹೀಗಾಗಿ ಇಂತಹ ತೊಂದರೆಗಳನ್ನು ರೈತರು ಕೂಡಲೇ ಸರಿಪಡಿಸಿಕೊಳ್ಳಬೇಕು. ಬೆಳೆ ವಿಮೆ ಬಗ್ಗೆ ಎಡಿಎ, ಜೆಡಿಎಗಳು ಸಹ ಸರಿಯಾಗಿ ಮಾಹಿತಿ ಪಡೆದು ತಮ್ಮನ್ನು ಸಂಪರ್ಕಿಸುವ ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸಭೆಯಲ್ಲಿ ಸಚಿವರು ತಿಳಿಸಿದರು.

ಕರ್ನಾಟಕದಲ್ಲೇ ಅತೀ ಹೆಚ್ಚು ಬೆಳೆವಿಮೆ:

ದೇಶದಲ್ಲಿ ಕರ್ನಾಟಕವೇ ಅತಿಹೆಚ್ಚು ಬೆಳೆವಿಮೆಯನ್ನು ನೀಡಿದ ರಾಜ್ಯವಾಗಿದ್ದು, 2018-19ನೇ ಸಾಲಿನಲ್ಲಿ 12.80 ಲಕ್ಷ ರೈತ ಫಲಾನುಭವಿಗಳಿಗೆ ರೂ. 2595.86 ಕೋಟಿಗಳು ವಿಮಾ ನಷ್ಟ ಪರಿಹಾರ ಲೆಕ್ಕ ಹಾಕಲಾಗಿದೆ. ಅದರಲ್ಲಿ 12.73 ಲಕ್ಷ ರೈತ ಫಲಾನುಭವಿಗಳಿಗೆ ರೂ.2,586.27 ಕೋಟಿಗಳ ಬೆಳೆ ವಿಮೆ ಪರಿಹಾರ ಮೊತ್ತ ವಿಮಾ ಸಂಸ್ಥೆಯವರಿಂದ ಇತ್ಯರ್ಥಪಡಿಸಲಾಗಿರುತ್ತದೆ. ಉಳಿದ 6,215 ರೈತರಿಗೆ ರೂ.9.58 ಕೋಟಿ ರೂ. ಬಾಕಿ ಇರುತ್ತದೆ.

2019-20ನೇ ಸಾಲಿನಲ್ಲಿ 6.81 ಲಕ್ಷ ರೈತ ಫಲಾನುಭವಿಗಳಿಗೆ ರೂ. 771.81 ಕೋಟಿ ರೂ. ವಿಮಾ ನಷ್ಟ ಪರಿಹಾರ ಲೆಕ್ಕ ಹಾಕಲಾಗಿದ್ದು, ಅದರಲ್ಲಿ 6.44 ಲಕ್ಷ ರೈತ ಫಲಾನುಭವಿಗಳಿಗೆ ರೂ.736.37 ಕೋಟಿ ರೂ. ಬೆಳೆ ವಿಮೆ ಪರಿಹಾರ ಮೊತ್ತ ವಿಮಾ ಸಂಸ್ಥೆಯವರಿಂದ ಇತ್ಯರ್ಥಪಡಿಸಲಾಗಿರುತ್ತದೆ. ಉಳಿದ 37,202 ರೈತರಿಗೆ ರೂ.35.43 ಕೋಟಿ ರೂ. ಬಾಕಿ ಇದೆ.
ಸದರಿ ವರ್ಷಗಳ ಎಲ್ಲಾ ಹಂಗಾಮುಗಳಲ್ಲಿ ಬಾಕಿ ಇರುವ ವಿಮಾ ಮೊತ್ತವು ರೈತರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವ ಕಾರಣ/ Account reached maximum Credit limit set on account/ A/c Blocked or Frozen/ Inactive Aadhaar, NPCI failed cases ಕಾರಣಗಳಿಂದ ಬಾಕಿ ಇರುತ್ತದೆ.

ಈ ಕುರಿತು ರೈತರು ತಮ್ಮ ತಮ್ಮ ಬ್ಯಾಂಕುಗಳಲ್ಲಿ ಈ ಮೇಲಿನ ಸಮಸ್ಯೆಗಳನ್ನು ಸರಿಪಡಿಸಿ, ಸಂಬಂಧಪಟ್ಟ ವಿಮಾ ಸಂಸ್ಥೆಯವರಿಗೆ ತಿಳಿಸಿದ್ದಲ್ಲಿ ವಿಮಾ ಮೊತ್ತ ಪರಿಹಾರ ವಿತರಿಸಲಾಗುವುದು ಎಂದು ಅಧಿಕಾರಿಗಳಿಂದ ಸಭೆಯಲ್ಲಿ ವಿವರಿಸಲಾಯಿತು.

ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಮುಂಗಾರು 2019 ರ ಹಂಗಾಮಿನಲ್ಲಿ14.20 ಲಕ್ಷ ರೈತರು 12.15 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿರುತ್ತಾರೆ. ಈ ಹಂಗಾಮಿನಲ್ಲಿ ಬೆಳೆ ನೋಂದಣಿಯಾದ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯ ದತ್ತಾಂಶಗಳೂಂದಿಗೆ ತಾಳೆ ಮಾಡಿ ಕ್ಲೈಮ್ ಇನಿಷಿಯೇಟ್ ಮಾಡಲಾಗಿರುತ್ತದೆ. ಒಟ್ಟು 5.65 ಲಕ್ಷ ರೈತ ಫಲಾನುಭವಿಗಳಿಗೆ 658.34 ಕೋಟಿ ರೂ.ಗಳ ಕ್ಲೈಮ್ ಇನಿಷಿಯೇಟ್ ಮಾಡಲಾಗಿರುತ್ತದೆ. ವಿಮಾ ಸಂಸ್ಥೆಯವರು 4.62 ಲಕ್ಷ ಫಲಾನುಭವಿಗಳಿಗೆ ರೂ.558.88 ಕೋಟಿ ರೂ.ಗಳ ಬೆಳೆ ವಿಮಾ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಿರುತ್ತಾರೆ. ಬಾಕಿ ಉಳಿದ ರೂ.99.46 ಕೋಟಿ ರೂ. ಇತ್ಯರ್ಥ ಪಡಿಸುವ ಕಾರ್ಯ ಪ್ರಕ್ರಿಯೆಯಲ್ಲಿರುತ್ತದೆ.

2019-20 ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 6.81 ಲಕ್ಷ ರೈತರು ನೋಂದಣಿಯಾಗಿರುತ್ತಾರೆ. ಸದರಿ ಹಂಗಾಮಿನಲ್ಲಿಯೂ ಸಹ ಬೆಳೆ ನೋಂದಣಿಯಾದ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯ ದತ್ತಾಂಶಗಳೂಂದಿಗೆ ತಾಳೆ ಮಾಡುವ ಕಾರ್ಯ ಎನ್​​ಐಸಿ ವತಿಯಿಂದ ಪ್ರಗತಿಯಲ್ಲಿದೆ.

2020 ರ ಮುಂಗಾರು ಹಂಗಾಮಿಗೆ ಒಟ್ಟು 11.01 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿರುತ್ತಾರೆ. ಒಟ್ಟು 12.81 ಲಕ್ಷ ಹೆಕ್ಟೇರ್ ಪ್ರದೇಶ ವಿಸ್ತೀರ್ಣವು ಬೆಳೆ ವಿಮೆಗೆ ಒಳಪಡಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details