ಕರ್ನಾಟಕ

karnataka

ETV Bharat / state

ಇಂದು ಮುಗಿದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ: ನಾಳೆ ನಾಮಪತ್ರ ಪರಿಶೀಲನೆ - assembly election

ರಾಜ್ಯ ವಿಧಾನಸಭೆ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಇಂದು ಮುಗಿದಿದೆ.

nomination-submission-process-completed-enquiry-of-nomination-starts-from-tomorrow
ಇಂದು ಮುಗಿದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ: ನಾಳೆ ನಾಮಪತ್ರ ಪರಿಶೀಲನೆ

By

Published : Apr 20, 2023, 6:26 PM IST

ಬೆಂಗಳೂರು:ವಿಧಾನಸಭೆ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಇಂದು ಮುಕ್ತಾಯಗೊಂಡಿದ್ದು, ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ನಾಳೆ ಬೆಳಗ್ಗೆಯಿಂದ ಪರಿಶೀಲನೆ ನಡೆಸಲಿದ್ದು, ಮಧ್ಯಾಹ್ನ 3 ಗಂಟೆಯ ನಂತರ ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಸಿಂಧುವಾದ ನಾಮಪತ್ರಗಳು ಹಾಗೂ ತಿರಸ್ಕೃತಗೊಂಡ ನಾಮಪತ್ರಗಳ ವಿವರವನ್ನು ಪ್ರಕಟಿಸಲಿದ್ದಾರೆ. ಬಹಳಷ್ಟು ಅಭ್ಯರ್ಥಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಒಂದಕ್ಕಿಂತ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24ರ ಮಧ್ಯಾಹ್ನ 3 ಗಂಟೆವರೆಗೂ ಕಾಲಾವಕಾಶವಿದೆ. ಆ ಬಳಿಕ ಚುನಾವಣಾ ಕಣದಲ್ಲಿ ಅಂತಿಮವಾಗಿ ಉಳಿಯುವ ಅಭ್ಯರ್ಥಿಗಳ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಈಗಾಗಲೇ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ, ಎಸ್​​ಡಿಪಿಐ, ಬಿಎಸ್​ಪಿ, ಸಿಪಿಐ, ಸಿಪಿಐಎಂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ರಾಜಕೀಯ ಪಕ್ಷಗಳಿಂದ ಟಿಕೆಟ್ ಸಿಗದ ಆಕಾಂಕ್ಷಿಗಳು ಮಾತೃ ಪಕ್ಷ ತೊರೆದು ಅನ್ಯ ಪಕ್ಷ ಸೇರುವ ಮೂಲಕ ಸ್ಪರ್ಧೆಗಿಳಿದಿದ್ದಾರೆ. ಇನ್ನೂ ಕೆಲವರು ಸ್ವತಂತ್ರವಾಗಿ ಸ್ಪರ್ಧಿಸುವ ಮೂಲಕ ಬಂಡಾಯದ ಬಾವುಟ ಸಹ ಹಾರಿಸಿದ್ದಾರೆ.

ಹೀಗಾಗಿ, ಸೋಮವಾರದವರೆಗೂ ಬಂಡಾಯಗಾರರ ಮನವೊಲಿಸುವ ಪ್ರಕ್ರಿಯೆ ರಾಜಕೀಯ ಪಕ್ಷಗಳ ನಾಯಕರು, ಮುಖಂಡರಿಂದ ನಡೆಯಲಿದೆ. ಮಂಗಳವಾರದಿಂದ ಚುನಾವಣಾ ಕಣದಲ್ಲಿ ಬಿರುಸಿನ ಪ್ರಚಾರ ಆರಂಭವಾಗಲಿದೆ.

ಕೋಲಾರ ಚುನಾವಣಾಧಿಕಾರಿ ವಿರುದ್ಧ ಜೆಡಿಎಸ್ ದೂರು:ಕೋಲಾರ ಜಿಲ್ಲಾದ್ಯಂತ ಚುನಾವಣಾ ಪ್ರಚಾರ ವಾಹನಗಳಲ್ಲಿ ಮೈಕ್ ಬಳಸುವುದನ್ನು ಕೋಲಾರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ವೆಂಕಟ್ ರಾಜಾ ಅವರು ನಿಷೇಧಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಮೈಕ್ ಬಳಕೆಯ ನಿಷೇಧದಿಂದ ಕೋಲಾರ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಅಭ್ಯರ್ಥಿಗಳು ಪರಿಣಾಮಕಾರಿಯಾಗಿ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಪ್ರಚಾರ ವಾಹನಗಳಲ್ಲಿ ಮೈಕ್ ಬಳಕೆಗೆ ಯಾವುದೇ ನಿರ್ಬಂಧವಿಲ್ಲ. ಆದರೂ, ಕೋಲಾರ ಜಿಲ್ಲೆಯಲ್ಲಿ ಮಾತ್ರ ಪ್ರಚಾರ ವಾಹನಗಳಲ್ಲಿ ಮೈಕ್ ಬಳಸಲು ಅನುಮತಿ ನೀಡಿಲ್ಲ. ಇಡೀ ರಾಜ್ಯಕ್ಕೆ ಒಂದು ನಿಯಮ ಅನ್ವಯವಾದರೆ, ಕೋಲಾರ ಜಿಲ್ಲೆಗೆ ಬೇರೆ ನಿಯಮ ಅನ್ವಯವಾಗುವುದೇ ಎಂದು ಪ್ರಶ್ನಿಸಿದ್ದಾರೆ.

ಪ್ರಚಾರ ವಾಹನಗಳಿಗೆ ಮೈಕ್​ಗಳನ್ನು ಬಳಸದಂತೆ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ ಎಂದು ಮಾಲೂರು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ನಮ್ಮ ಪಕ್ಷದ ಅಭ್ಯರ್ಥಿಗೆ ತಿಳಿಸಿದ್ದಾರೆ. ಇದರಿಂದ ಚುನಾವಣಾಧಿಕಾರಿ ಕರ್ತವ್ಯದ ಮಿತಿ ಮೀರಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮತ್ತು ಅವರ ಬೆಂಬಲಿಗರಿಗೆ ಅನಗತ್ಯ ತೊಂದರೆ ಕೊಡದಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಮತ್ತು ವಿಶೇಷವಾಗಿ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ವಾಹನಗಳಲ್ಲಿ ಮೈಕ್ ಬಳಕೆಗೆ ಅನುಮತಿ ನೀಡಬೇಕು. ಕೋಲಾರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ದೂರಿನಲ್ಲಿ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಠೇವಣಿ ಮುಟ್ಟುಗೋಲು ಟೆನ್ಷನ್: 3 ಚುನಾವಣೆಗಳಲ್ಲಿ ಠೇವಣಿ ಜಪ್ತಿಯ ಸ್ವಾರಸ್ಯಕರ ಅಂಕಿಅಂಶ

ABOUT THE AUTHOR

...view details