ಬೆಂಗಳೂರು:ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಶಿಫಾರಸು ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದೂರು ದಾಖಲಾದ ಹಿನ್ನೆಲೆ ಪರಿಶೀಲನೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ರಾಜ್ಯಪಾಲರಿಗೆ ಕರ್ನಾಟಕ ರಾಜ್ಯ ಮುಸ್ಲಿಂ ಜನ ಜಾಗೃತಿ ವೇದಿಕೆ ಮತ್ತು ನ್ಯಾಯಮಿತ್ರ ಸಂಘಟನೆಯ ಕಾರ್ಯದರ್ಶಿ ರಾಘವಾಚಾರ್ ಶಾಸ್ತ್ರಿ ಅವರು ದೂರು ನೀಡಿದ್ದರು. ಈ ದೂರು ಹಿನ್ನೆಲೆಯಲ್ಲಿ ಆರೋಪದ ಬಗ್ಗೆ ಪರಿಶೀಲನೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ.
ಎಂ ಆರ್ ಸೀತಾರಾಮ್, ಸುಧಾಮ್ ದಾಸ್ ಮತ್ತು ಮನ್ಸೂರ್ ಖಾನ್ ನಾಮನಿರ್ದೇಶನ ಶಿಫಾರಸು ಬಗ್ಗೆ ಆಕ್ಷೇಪಿಸಲಾಗಿತ್ತು. ಈ ಸಂಬಂಧ ರಾಜ್ಯಪಾಲರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪರಿಶೀಲಿಸುವಂತೆ ನಿರ್ದೇಶನ ನೀಡಿದ್ದಾರೆ. ಸಾಮಾಜಿಕ ಸೇವೆ ಕ್ಷೇತ್ರದಲ್ಲಿ ಸುಧಾಮ್ ದಾಸ್, ಶಿಕ್ಷಣ ಕ್ಷೇತ್ರದಲ್ಲಿ ಎಂ. ಆರ್. ಸೀತಾರಾಮ್ ಮತ್ತು ಸಹಕಾರ ಕ್ಷೇತ್ರದಿಂದ ಮನ್ಸೂರ್ ಖಾನ್ ಅವರನ್ನು ವಿಧಾನಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿ ಶಿಫಾರಸು ಮಾಡಲಾಗಿತ್ತು. ಜುಲೈ 29ಕ್ಕೆ ಮೂವರ ನಾಮನಿರ್ದೇಶನಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಈ ಹಿಂದೆ ವಿ ಸೋಮಣ್ಣ ಅವರ ಹೆಸರು ಸಹ ಇದೇ ರೀತಿ ಆಕ್ಷೇಪಣೆಗೆ ಒಳಗಾಗಿತ್ತು. ನಾಮನಿರ್ದೇಶನ ಶಿಫಾರಸು ವೇಳೆ ನಿಗದಿತ ವಿಭಾಗ ಮತ್ತು ಶಿಫಾರಸುಗೊಂಡವರ ಬಗ್ಗೆ ಸೂಕ್ತ ದಾಖಲೆ ಸಲ್ಲಿಸಬೇಕು. ವಿ ಸೋಮಣ್ಣ ಶಿಕ್ಷಣ ಕ್ಷೇತ್ರದಿಂದ ಶಿಫಾರಸುಗೊಂಡಿದ್ದರು. ಅಂದು ರಾಜ್ಯಪಾಲರು ತಿರಸ್ಕಾರ ಮಾಡಿದ್ದರಿಂದ ಸಾಮಾಜಿಕ ಕ್ಷೇತ್ರದ ಮೂಲಕ ಪರಿಷತ್ ಸದಸ್ಯರಾಗಿ ನೇಮಕ ಮಾಡಲಾಗಿತ್ತು.