ಬೆಂಗಳೂರು:ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಹೈಕೋರ್ಟ್‌ನ ಈ ಆದೇಶದಿಂದ ಚಿಕ್ಕಮಗಳೂರು ಕ್ಷೇತ್ರದಿಂದ ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದ ಬಿಜೆಪಿ ಎಂ.ಕೆ.ಪ್ರಾಣೇಶ್ ಪೇಚಿಗೆ ಸಿಲುಕಿದಂತಾಗಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ 6 ಮತಗಳ ಅಂತರದಲ್ಲಿ ಸೋಲುಂಡಿದ್ದ ಕಾಂಗ್ರೆಸ್ ಪಕ್ಷದ ಗಾಯತ್ರಿ ಶಾಂತೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಹೇಮಂತ್ ಚಂದನ್ ಗೌಡರ್‌ರವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಸಂವಿಧಾನದ ಕಲಂ 243(6) ಮತ್ತು ಕೆಎಂಸಿ ಕಾಯಿದೆ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಮುನಿಸಿಪಾಲಿಟಿ ಸಭೆಗಳಲ್ಲೂ ಸಹ ಮತದಾನ ಮಾಡುವ ಹಕ್ಕಿಲ್ಲ, ಅವರು ಸಲಹೆ-ಸೂಚನೆಗಳನ್ನು ನೀಡಬಹುದಷ್ಟೇ. ಹಾಗಾಗಿ ವಿಧಾನಪರಿಷತ್ ಚುನಾವಣೆಯಲ್ಲೂ ಸಹ ಮತದಾನದ ಹಕ್ಕು ಇರುವುದಿಲ್ಲ ಎಂದು ನ್ಯಾಯಪೀಠ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರು, ಚಿಕ್ಕಮಗಳೂರು ಕ್ಷೇತ್ರದಿಂದ ನಡೆದ ಚುನಾವಣೆಯ ಮತದಾರರ ಪಟ್ಟಿಗೆ 4 ಪಟ್ಟಣ ಪಂಚಾಯ್ತಿಗಳ 12 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದು ಕಾನೂನುಬಾಹಿರ ಕ್ರಮ. ಸಂವಿಧಾನದ ನಿಯಮಗಳ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಭಾಗವಹಿಸಬಹುದೇ ಹೊರತು, ಅವರಿಗೆ ಮತದಾನದ ಹಕ್ಕಿರುವುದಿಲ್ಲ. ಹಾಗಾಗಿ ಕಾನೂನು ಬಾಹಿರವಾಗಿ ಅವರಿಗೆ ಮತದಾನದ ಹಕ್ಕು ನೀಡಿರುವುದರಿಂದ ಆ ಮತಗಳ ಆಧಾರದ ಮೇಲೆ ಎಂ.ಕೆ.ಪ್ರಾಣೇಶ್ ಗೆಲುವು ಪಡೆದಿದ್ದಾರೆ ಎಂದು ವಾದಿಸಿದ್ದರು.
ಆದರೆ ಚುನಾವಣಾ ಆಯೋಗ ಮತ್ತು ಪ್ರಾಣೇಶ್ ಪರ ವಕೀಲ ಶರತ್ ದೊಡ್ಡವಾಡ, ನಾಮನಿರ್ದೇಶಿತರ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಮತದಾನದ ಹಕ್ಕಿಲ್ಲ ಎಂದಾಕ್ಷಣ ವಿಧಾನಪರಿಷತ್ ಚುನಾವಣೆಯಲ್ಲೂ ಮತದಾನದ ಹಕ್ಕಿಲ್ಲವೆಂದು ಹೇಳಲಾಗದು. ಸ್ಥಳೀಯ ಸಂಸ್ಥೆಗಳ ಸಭೆ ಬೇರೆ ಮತ್ತು ವಿಧಾನಪರಿಷತ್ ಚುನಾವಣೆಯೇ ಬೇರೆ. ನಾಮನಿರ್ದೇಶಿತರಿಗೆ ವಿಧಾನಪರಿಷತ್‌ಗೆ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲವೆಂದು ಎಲ್ಲೂ ನಿರ್ಬಂಧ ಹೇರಿಲ್ಲ ಎಂದು ಹೇಳಿದ್ದರು.