ಬೆಂಗಳೂರು:ಶಬ್ದ ಮಾಲಿನ್ಯ ಉಂಟುಮಾಡುವವರ ವಿರುದ್ಧ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ಪರಿಸರ ಸಂರಕ್ಷಣೆ ಕಾಯ್ದೆಯಡಿ ದೂರು ದಾಖಲಿಸಲು ಸಿಲಿಕಾನ್ ಸಿಟಿಯ ಎಲ್ಲಾ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತರು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ನಿರ್ದೇಶಿಸುವಂತೆ ಕೋರಿ ಗಿರೀಶ್ ಭಾರದ್ವಾಜ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಪ್ರಮಾಣಪತ್ರವನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.
ಬಳಿಕ ವಿವರಣೆ ನೀಡಿ, ಶಬ್ದ ಮಾಲಿನ್ಯ ಉಂಟು ಮಾಡುತ್ತಿದ ನಗರದ 8 ಮಸೀದಿ, 1 ಚರ್ಚ್ ಮತ್ತು 3 ದೇವಸ್ಥಾನಗಳ ವಿರುದ್ಧ ಆಯಾ ವಿಭಾಗದ ಎಸಿಪಿ ಕಾನೂನು ಕ್ರಮ ಜರುಗಿಸಿದ್ದಾರೆ. ಕಾನೂನು, ಸುವ್ಯವಸ್ಥೆ ನೋಡಿಕೊಳ್ಳುವ ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೂ ಶಬ್ದ ಮಾಲಿನ್ಯ ಅಳೆಯುವ ಮಾಪಕ ಒದಗಿಸಲಾಗಿದೆ. ಶಬ್ದ ಮಾಲಿನ್ಯ ಉಂಟು ಮಾಡುವವರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 15ರಡಿ ದೂರು ದಾಖಲಿಸುವಂತೆ ಎಲ್ಲಾ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟಗಳಿಗೆ ಸೂಚನೆ ನೀಡಲಾಗಿದೆ.
ಅಲ್ಲದೇ, ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದಿದ್ದ ಗುಪ್ತಚರ ವಿಭಾಗದ ಡಿಸಿಪಿಯ ನಡಾವಳಿಗೆ ಆಯುಕ್ತರು ಕ್ಷಮೆ ಕೋರಿದ್ದಾರೆ. ಪ್ರಸ್ತುತ ಪೊಲೀಸ್ ಠಾಣೆಗಳಿಗೆ ಒದಗಿಸಿರುವ ಮಾಪಕಗಳೆಲ್ಲವೂ ಕಾರ್ಯ ನಿರ್ವಹಣೆ ಸ್ಥಿತಿಯಲ್ಲಿವೆ. ಅವುಗಳನ್ನು ಬಳಸುವ ಪೊಲೀಸರಿಗೆ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.