ಬೆಂಗಳೂರು :ಭಾರತೀಯ ನರ್ಸಿಂಗ್ ಕೌನ್ಸಿಲ್ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕದಲ್ಲಿರುವ ನರ್ಸಿಂಗ್ ಕಾಲೇಜುಗಳು ನಡೆಯುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅವುಗಳಲ್ಲಿನ ಮೂಲ ಸೌಕರ್ಯಗಳ ಪರಿಶೀಲನೆಗೆ ವಿಧಾನಪರಿಷತ್ ರಚಿಸಿರುವ ಉಪ ಸಮಿತಿಯಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ವಿಧಾನಪರಿಷತ್ ರಚನೆ ಮಾಡಿದ್ದ ಉಪ ಸಮಿತಿಯನ್ನು ಎತ್ತಿ ಹಿಡಿದಿದ್ದ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಸ್ಟೇಟ್ ಆಸೋಸಿಯೇಷನ್ ಆಫ್ ಮ್ಯಾನೇಜ್‌ಮೆಂಟ್ ಆಫ್ ನರ್ಸಿಂಗ್ ಮತ್ತು ಅಲ್ಲೈಡ್ ಹೆಲ್ತ್ ಸೈನ್ಸ್ ಇನ್‌ಸ್ಟಿಟ್ಯೂಷನ್ ಮೇಲ್ಮನವಿ ಸಲ್ಲಿಸಿದ್ದವು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ವಿಧಾನಪರಿಷತ್ ಉಪ ಸಮಿತಿ ರಚನೆ ಮಾಡಿರುವ ಪ್ರಕ್ರಿಯೆಯಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ವಿಧಾನ ಪರಿಷತ್ ನರ್ಸಿಂಗ್ ಕಾಲೇಜುಗಳ ಮೇಲ್ವಿಚಾರಣೆಗಾಗಿ ಸಮಿತಿಯನ್ನು ರಚನೆ ಮಾಡಿಲ್ಲ. ಅದಕ್ಕೆ ಬದಲಾಗಿ ಕಾಲೇಜುಗಳ ನಿರ್ವಹಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುವುದಕ್ಕಾಗಿ ರಚಿಸಲಾಗಿದೆ.
ಈ ಉಪ ಸಮಿತಿಗೆ ಕಾಲೇಜುಗಳಲ್ಲಿನ ಮೂಲಸೌಕರ್ಯ ಸೇರಿದಂತೆ ಇತರ ಸಮಸ್ಯೆಗಳ ಪರಿಶೀಲನೆ ನಡೆಸಿ ವರದಿ ನೀಡುವ ಅಧಿಕಾರ ಮಾತ್ರವಿದೆ. ಆದರೆ, ಆ ವರದಿಯಲ್ಲಿರುವ ಅಂಶಗಳನ್ನು ಪರಿಗಣಿಸಿ ಕ್ರಮಕ್ಕೆ ಮುಂದಾಗುವ ಅಧಿಕಾರ ಇಲ್ಲ ಎಂದು ತಿಳಿಸಿದೆ. ಜೊತೆಗೆ, ಏಕಸದಸ್ಯ ಪೀಠ ಎಲ್ಲ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಈ ಆದೇಶವನ್ನು ನೀಡಿದೆ. ಈ ಆದೇಶದಲ್ಲಿ ಯಾವುದೇ ನಿಯಮಗಳು ಉಲ್ಲಂಘನೆ ಆಗಿರುವುದು ಕಂಡು ಬಂದಿಲ್ಲ. ಹೀಗಾಗಿ ಪ್ರಕರಣದಲ್ಲಿ ಮಧ್ಯಪ್ರವೇಶಕ್ಕೆ ನಿರಾಕರಿಸುತ್ತಿರುವುದಾಗಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?:ನರ್ಸಿಂಗ್ ಕಾಲೇಜುಗಳು ಮತ್ತು ಅಲ್ಲೈಡ್ ಹೆಲ್ತ್ ಸೈನ್ಸ್ ಕಾಲೇಜ್ ಮತ್ತು ರಾಜ್ಯದಲ್ಲಿರುವ ನರ್ಸಿಂಗ್ ಸ್ಕೂಲ್ಗಳಲ್ಲಿ ಇಂಡಿಯನ್ ನರ್ಸಿಂಗ್ ಕೌನ್ಸಿಲ್‌ನ ಮಾರ್ಗಸೂಚಿಗಳಂತೆ ಕಟ್ಟಡ ಸೇರಿದಂತೆ ಇತರ ಮೂಲ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲು ಉಪ ಸಮಿತಿ ರಚನೆ ಮಾಡಿರುವುದಾಗಿ ಕರ್ನಾಟಕ ವಿಧಾನಪರಿಷತ್ ಕಾರ್ಯದರ್ಶಿ ಅರ್ಜಿದಾರರಿಗೆ ಮೇ 5ರ 2022ರಂದು ಪತ್ರದ ಮೂಲಕ ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಕರ್ನಾಟಕ ಸ್ಟೇಟ್ ಆಸೋಸಿಯೇಷನ್ಸ್ ಆಫ್ ಆಫ್ ದಿ ಮ್ಯಾನೇಜ್‌ಮೆಮಟ್ ಆಫ್ ನರ್ಸಿಂಗ್ ಅಂಡ್ ಅಲ್ಲೈಡ್ ಹೆಲ್ತ್ ಸೈನ್ಸ್ ಇನ್ಸ್ಟಿಟ್ಯೂಷನ್ಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಮೇಲ್ಮನವಿ ಸಲ್ಲಿಕೆ:ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠವು ಅರ್ಜಿ ವಜಾಗೊಳಿಸಿ, ವಿಧಾನಪರಿಷತ್ ರಚನೆ ಮಾಡಿರುವ ಉಪ ಸಮಿತಿಯಲ್ಲಿ ಯಾವುದೇ ಉಲ್ಲಂಘನೆ ಕಂಡು ಬಂದಿಲ್ಲ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ವೇಳೆ, ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ವಿಧಾನಪರಿಷತ್ ನಿಯಮ 199ರ ಪ್ರಕಾರ ಉಪ ಸಮಿತಿ ರಚನೆ ಮಾಡಲಾಗಿದೆ. ಸಂವಿಧಾನದ ಪರಿಚ್ಛೇದ 194(3)ರನ್ನು ಉಲ್ಲಂಘಿಸಿ ಉಪಸಮಿತಿ ರಚನೆ ಮಾಡಿಲ್ಲ. ಈ ಸಮಿತಿ ರಚನೆ ಮಾಡಿರುವ ಉದ್ದೇಶ ಕಾಲೇಜುಗಳು ನಿರ್ವಹಣೆಗೆ ಅಗತ್ಯವಿರುವ ಕನಿಷ್ಠ ಮೂಲಸೌಲಭ್ಯ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ವಿಧಾನಪರಿಷತ್‌ಗೆ ನರ್ಸಿಂಗ್ ಕಾಲೇಜುಗಳ ಪರಿಶೀಲನೆಗೆ ಉಪ ಸಮಿತಿ ರಚನೆ ಮಾಡುವುದಕ್ಕೆ ಅಧಿಕಾರ ವ್ಯಾಪ್ತಿ ಇಲ್ಲ. ಈ ಸಮಿತಿಗೆ ಕಾಲೇಜುಗಳ ಪರಿಶೀಲನೆ ನಡೆಸಿ ಮೌಲ್ಯಮಾಪನ ಮಾಡುವ ಹಕ್ಕು ಇಲ್ಲ. ಜೊತೆಗೆ, ಸಂವಿಧಾನದ ಪರಿಚ್ಛೇದ 194 (3)ರ ಅಡಿ ಈ ರೀತಿಯ ಸಮಿತಿ ರಚನೆ ಮಾಡುವುದಕ್ಕೆ ವಿಧಾನಪರಿಷತ್‌ಗೆ ಅಧಿಕಾರವಿಲ್ಲ ಎಂದು ವಾದ ಮಂಡಿಸಿದ್ದರು. ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಆದೇಶ ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ:ವಿದ್ಯುತ್ ಪ್ರಸರಣ ಘಟಕಗಳ ಸುತ್ತಲು ನೈರ್ಮಲ್ಯ ಕಾಪಾಡಿ: ಬೆಸ್ಕಾಂ, ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ