ಕರ್ನಾಟಕ

karnataka

ETV Bharat / state

ಅಬಕಾರಿ ನಿಯಮ ಉಲ್ಲಂಘನೆ ಆರೋಪದಲ್ಲಿ ವಾರಂಟ್ ಇಲ್ಲದೆ ದಾಳಿಗೆ ಅವಕಾಶವಿಲ್ಲ - ಕೊಪ್ಪಳ ವಲಯ ಅಬಕಾರಿ ನಿರೀಕ್ಷಕರು

ಅಕ್ರಮ ಮದ್ಯ ಮಾರಾಟ ಆರೋಪ ಹೊತ್ತವರ ಮೇಲೆ ವಾರೆಂಟ್ ಇಲ್ಲದೇ ನಡೆಯುವ ದಾಳಿಗೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ಮಹತ್ವದ ಆದೇಶ ಪ್ರಕಟಿಸಿದೆ.

High Court
ಹೈಕೋರ್ಟ್

By

Published : Dec 28, 2022, 7:37 PM IST

ಬೆಂಗಳೂರು : ಮದ್ಯ ಮಾರಾಟಕ್ಕೆ ಮಾತ್ರ ಪರವಾನಿಗೆ ಪಡೆದು ಮದ್ಯ ಸೇವನೆಗೂ ಅವಕಾಶ ನೀಡುವುದು ಮತ್ತು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಆರೋಪ ಹೊತ್ತವರ ಮೇಲೆ ವಾರೆಂಟ್ ಇಲ್ಲದೇ ದಾಳಿ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಸಿಎಲ್-2 ಪರವಾನಗಿ ಹೊಂದಿದ್ದ ಎಂ.ಸುದರ್ಶನ ಗೌಡ ಎಂಬುವರು ಮದ್ಯ ಮಾರಾಟ ಮಳಿಗೆಯ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದ ಕೊಪ್ಪಳ ವಲಯ ಅಬಕಾರಿ ನಿರೀಕ್ಷಕರ ಕ್ರಮ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ, ಪೊಲೀಸರು ವಾರೆಂಟ್ ಇಲ್ಲದೇ ದಾಳಿ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿ ಪ್ರಕರಣವನ್ನು ರದ್ದುಪಡಿಸಿದರು.

ಪರವಾನಿಗೆದಾರರು ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣದಲ್ಲಿ ಅಬಕಾರಿ ನಿರೀಕ್ಷಕರು ವಾರೆಂಟ್ ಪಡೆದು ಅಥವಾ ಶೋಧ ನಡೆಸಲು ಸಕಾರಣಗಳನ್ನು ನಮೂದಿಸಿದ ಬಳಿಕ ಮದ್ಯದಂಗಡಿ ಮೇಲೆ ದಾಳಿ ನಡೆಸಿ ಶೋಧ ಮಾಡಬಹುದು. ಅಲ್ಲಿ ಅಕ್ರಮ ನಡೆಯುತ್ತಿದ್ದರೆ ಜಪ್ತಿ ಕಾರ್ಯ ಮಾಡಬಹುದು. ಆದರೆ, ವಾರೆಂಟ್ ಇಲ್ಲದೆ ದಾಳಿ ನಡೆಸುವಂತಿಲ್ಲ ಎಂದು ಕೋರ್ಟ್ ತಿಳಿಸಿತು.

ಪ್ರಕರಣದ ಹಿನ್ನೆಲೆ ಹೀಗಿದೆ..:ಅರ್ಜಿದಾರ ಎಂ.ಸುದರ್ಶನ್ ಅವರು ಕೊಪ್ಪಳ ಜಿಲ್ಲೆಯ ಆಗಲಕೆರೆ ಎಂಬಲ್ಲಿ ಸಿಎಲ್-2 ಪರವಾನಿಗೆ ಪಡೆದಿದ್ದರು. ಈ ಮಳಿಗೆಯಲ್ಲಿ ಮಾರಾಟಕ್ಕೆ ಮಾತ್ರ ಅವಕಾಶವಿದ್ದರೂ, ಸ್ಥಳದಲ್ಲಿ ಮದ್ಯಪಾನ ಮಾಡುವುದಕ್ಕೆ ಸಂಬಂಧಿಸಿದಂತೆ ಆರೋಪಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕೊಪ್ಪಳ ವಲಯ ಅಬಕಾರಿ ನಿರೀಕ್ಷಕರು ದಾಳಿ ನಡೆಸಿ ಎಫ್‌ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ಸುದರ್ಶನ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಅಬಕಾರಿ ಪೊಲೀಸರ ದಾಳಿ: 20 ಲಕ್ಷ ರೂ. ಮೌಲ್ಯದ ನಕಲಿ ಮದ್ಯ ಜಪ್ತಿ, ಒಬ್ಬನ ಬಂಧನ

ABOUT THE AUTHOR

...view details