ಬೆಂಗಳೂರು :ನಗರದಲ್ಲಿ ಕೇವಲ 40 ಸಾವಿರ ವ್ಯಾಕ್ಸಿನ್ ಡೋಸೇಜ್ ಮಾತ್ರ ಲಭ್ಯವಿದ್ದು, ಇಂದು ಮುಗಿಯಲಿದೆ. ನಾಳೆಗೆ ರಾಜ್ಯ ಸರ್ಕಾರದಿಂದ ಪೂರೈಕೆಯಾದರೆ ವ್ಯಾಕ್ಸಿನೇಷನ್ ಮುಂದುವರಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಲಸಿಕೆ ಲಭ್ಯತೆ ಕುರಿತಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾಹಿತಿ.. ಇಂದು ನಗರದ ವ್ಯಾಕ್ಸಿನ್ ದಾಸ್ತಾನು ಕೇಂದ್ರವಾದ ದಾಸಪ್ಪ ಆಸ್ಪತ್ರೆ ಹಾಗೂ ಇಂದಿರಾ ಕ್ಯಾಂಟೀನ್ನ ಉಚಿತ ಊಟ ವಿತರಣೆ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಅಪಾರ್ಟ್ಮೆಂಟ್, ಸಂಘ-ಸಂಸ್ಥೆಗಳು, ನಾಗರಿಕರ ಕ್ಷೇಮಾಭಿವೃದ್ಧಿ ಸಂಘಗಳು, ಕೆಲಸದ ಜಾಗಗಳಲ್ಲಿ ನಡೆಸುತ್ತಿದ್ದ ವ್ಯಾಕ್ಸಿನ್ ವಿತರಣೆ ಕಾರ್ಯಕ್ರಮಗಳು ಲಸಿಕೆ ಪೂರೈಕೆಯಿಲ್ಲದೆ ಸ್ಥಗಿತಗೊಂಡಿವೆ ಎಂದು ತಿಳಿಸಿದರು.
2ನೇ ಡೋಸ್ ಪಡೆಯುವವರಿಗೆ ಆದ್ಯತೆ :ನಗರದಲ್ಲಿ 2ನೇ ಡೋಸ್ ಪಡೆಯುವ 45 ವರ್ಷ ಮೇಲ್ಪಟ್ಟವರಿಗೆ ಪ್ರಮುಖ ಆದ್ಯತೆ ನೀಡಿ ವ್ಯಾಕ್ಸಿನ್ ನೀಡಲಾಗುತ್ತದೆ. 2ನೇ ಡೋಸ್ ಸರಿಯಾದ ಸಮಯದಲ್ಲಿ ಸಿಗದಿದ್ದರೆ, ಮೊದಲ ಡೋಸ್ ಪಡೆದ ಪ್ರಯೋಜನವೂ ಸಿಗುವುದಿಲ್ಲ.
ನಂತರದ ಆದ್ಯತೆ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಕೊಡಲಾಗುವುದು. ಕೊನೆಯದಾಗಿ 18 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಕೊಡಲಾಗುವುದು. ಈ ವರ್ಷದವರಿಗೆ ಇನ್ನು ಲಸಿಕೆ ಪೂರೈಕೆಯಾಗಿಲ್ಲ. ಪೂರೈಕೆಯಾದ ನಂತರ ಕೊಡಲಾಗುವುದು ಎಂದು ಆಯುಕ್ತರು ತಿಳಿಸಿದರು.
ಒಂದೊಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ 400-500 ಜನ ಲಸಿಕೆಗೆ ಬಂದ್ರೂ, 200 ಜನಕ್ಕೆ ಮಾತ್ರ ಕೊಡಲು ಸಾಧ್ಯವಾಗುತ್ತಿದೆ. ನಗರದಲ್ಲಿ ಲಸಿಕೆ ದಾಸ್ತಾನು ಮಾಡುವ ವ್ಯವಸ್ಥೆ ಇದೆ. ಆದ್ರೆ, ಪೂರೈಕೆ ಕಡಿಮೆ ಆಗಿರುವುದರಿಂದ ಪೂರೈಕೆಗೆ ತಕ್ಕಂತೆ ವ್ಯಾಕ್ಸಿನ್ ವಿತರಣೆ ಮಾಡಲಾಗ್ತಿದೆ.
ಹೀಗಾಗಿ, ಎಲ್ಲರೂ ಮೊದಲೇ ನೋಂದಣಿ ಮಾಡಿಕೊಂಡು, ಸಮಯ ನಿಗದಿಯಾದ ನಂತರವೇ ಲಸಿಕೆ ಕೇಂದ್ರಗಳಿಗೆ ಬರಬೇಕು. ಇದರಿಂದ ಲಸಿಕಾ ಕೇಂದ್ರಗಳಲ್ಲಿ ಗುಂಪಾಗುವುದು ತಡೆಯಬಹುದು ಎಂದರು.
ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಅಭಾವ ಇದೆ. ಅಲ್ಲಿಯೂ ಅಭಾವ ತಡೆಯಬೇಕಿದೆ. ಇಡೀ ರಾಜ್ಯಕ್ಕೆ 3 ಕೋಟಿ ಲಸಿಕೆ ಅಗತ್ಯವಿದ್ದು, ಬೇಡಿಕೆ ಸಲ್ಲಿಸಲಾಗಿದೆ. ನಗರದಲ್ಲಿ ಟೆಸ್ಟಿಂಗ್ ಕಿಟ್ ಹಾಗೂ ಪ್ರಾಯೋಗಾಲಯಗಳ ಕೊರತೆ ಇದೆ.
ಕೋವಿಡ್ ಲಕ್ಷಣ ಇರುವವರಿಗೆ ಪ್ರಾಥಮಿಕ ಸಂಪರ್ಕಿತರನ್ನು ತಕ್ಷಣ ಟೆಸ್ಟಿಂಗ್ ಮಾಡುವಂತೆ ಸೂಚಿಸಲಾಗಿದೆ. ಟೆಸ್ಟಿಂಗ್ ಮುಂದುವರಿಸಲಾಗುತ್ತದೆ. ನಗರದಲ್ಲಿ 600 ಆ್ಯಂಬುಲೆನ್ಸ್ಗಳಿವೆ. ಇದರಲ್ಲಿ ಅಡ್ವಾನ್ಸ್ ಲೈಫ್ ಸಪೋರ್ಟ್‌ನ 441 ಆ್ಯಂಬುಲೆನ್ಸ್ಗಳಿವೆ ಎಂದರು.
ದಿನಕ್ಕೆ 3 ಲಕ್ಷ ಜನರಿಗೆ ಊಟ ವಿತರಣೆ ಗುರಿ :ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್ನ ಇಂದಿರಾ ಕಿಚನ್ಗೆ ಭೇಟಿ ನೀಡಿ, ಆಹಾರ ತಯಾರಿಕೆ ಪರಿಶೀಲಿಸಿದರು. ಅಡುಗೆ ಮನೆಯಲ್ಲಿ ಮುಖ್ಯ ಆಯುಕ್ತರು ಆಹಾರದ ರುಚಿ ನೋಡಿ, ಇದೇ ರೀತಿ ರುಚಿಯನ್ನು ನೀಡಬೇಕು ಎಂದು ಸೂಚಿಸಿದರು.
ನಗರದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲಿ ಬಡವರು, ವಲಸಿಗರು, ಕೂಲಿ ಕಾರ್ಮಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನದ ಮೂರು ಹೊತ್ತು ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಗೌರವ್ ಗುಪ್ತ ತಿಳಿಸಿದರು.
ಲಾಕ್ಡೌನ್ ಅವಧಿಯಲ್ಲಿ 24ರವರೆಗೂ 3 ಪೊಟ್ಟಣ ಆಹಾರ ಕೊಡಲಾಗುತ್ತದೆ. ಪಡಿತರ ಚೀಟಿ ಇದ್ರೆ ಹೆಚ್ಚು ಕೊಡಲಾಗುವುದು. 15 ಅಡುಗೆ ಮನೆಯಿಂದ ಆಹಾರ ಪೂರೈಕೆಯಾಗುತ್ತಿದ್ದು, 3 ಹೊತ್ತು ಊಟ, ತಿಂಡಿ ಸೇರಿ ದಿನಕ್ಕೆ 3 ಲಕ್ಷ ಜನರಿಗೆ ಕೊಡುವ ಗುರಿ ಇದೆ ಎಂದರು.
ಇನ್ನು, ಚಿಕ್ಕಪೇಟೆ ವಾರ್ಡ್- 109 ಇಂದಿರಾ ಕ್ಯಾಂಟೀನ್ ಭೇಟಿ ನೀಡಿದ ಆಯುಕ್ತರು ಆಹಾರ ಪೊಟ್ಟಣಗಳನ್ನು ವಿತರಿಸುವುದನ್ನು ಪರಿಶೀಲಿಸಿದರು. ಗುರುತಿನ ಚೀಟಿ ತರದಿದ್ದರು ಮುಂದಿನ ಬಾರಿ ತರಲು ತಿಳಿಸಿ ಆಹಾರ ಪೊಟ್ಟಣಗಳನ್ನು ನೀಡಲು ಸೂಚಿಸಿದರು.
ಓದಿ:ಕೋರ್ಟ್ ತರಾಟೆ ಬಳಿಕ ಎಚ್ಚೆತ್ತ ಸರ್ಕಾರ : ವಿಶೇಷ ಚೇತನರ ಲಸಿಕಾ ಅಭಿಯಾನಕ್ಕೆ ಪ್ರತ್ಯೇಕ ವ್ಯವಸ್ಥೆ