ಬೆಂಗಳೂರು: ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದರಿಂದ ನನಗೆ ಏನೂ ಲಾಭ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ಹೇಳಿದ್ದೇನೆ. ಆದರೆ ಸರ್ಕಾರದ ನಡೆ ರೈತರನ್ನು, ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಆರ್.ಟಿ.ನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಬಿಡುಗಡೆ ಆದೇಶ ಹಿನ್ನೆಲೆಯಲ್ಲಿ ಸಂಸದರ ನಿಯೋಗ ಹೋಗಲು ಏನೂ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರ ಆಸಕ್ತಿ ತೆಗೆದುಕೊಳ್ಳಬೇಕು. ನನ್ನ ಸಲಹೆ ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ ಸರ್ಕಾರದ ನಡೆ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರ ತಾನು ಸಲ್ಲಿಸಿರುವ ಅಫಿಡವಿಟ್ಗೆ ಬದ್ಧರಾಗಿರಬೇಕಲ್ವಾ? ಈಗ ಅಫಿಡವಿಟ್ ನಂತರವೂ ನೀರು ಬಿಡುವುದಕ್ಕೆ ಹೋದರೆ ಸರ್ಕಾರ ಸುಳ್ಳು ಹೇಳಿದ ಹಾಗೇ ಆಗುತ್ತದೆ. ಸರ್ಕಾರದ ಪ್ರತಿಯೊಂದು ನಡೆ ರೈತರನ್ನು, ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ ಎಂದರು.
ಸರ್ಕಾರದಲ್ಲಿ ಕೆಲಸ ಮಾಡುವವರಿಗೆ ಮಾಹಿತಿ, ಅರಿವು, ಜವಾಬ್ದಾರಿ ಇರಬೇಕು. ಏನೋ ಮಾತು ಹೇಳಬೇಕು ಅಂತಾ ಹೇಳುತ್ತಿದ್ದಾರೆ. ನಾವಿದ್ದಾಗಲೂ ಇಂತಹ ತೀರ್ಪು ಬಂದಿದೆ. ಆದರೆ ರಿವ್ಯೂ ಹಾಕಿದ್ದೆವು. ನೀರು ಬಿಟ್ಟ ಮೇಲೆ ವಾದ ಮಾಡಿ ಪ್ರಯೋಜನ ಇಲ್ಲ. ಇದೆಲ್ಲವೂ ಕೂಡ ಸರ್ಕಾರದಲ್ಲಿ ಕೆಲಸ ಮಾಡುವವರಿಗೆ ಅರಿವು ಇರಬೇಕು. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪ್ರಧಾನಿ ಬಳಿ ಹೋಗೊಣ ಅಂತ ಹೇಳುತ್ತಿದ್ದಾರೆ. ತಮಿಳುನಾಡು ನೀರಾವರಿ ಸಚಿವರನ್ನು ಭೇಟಿ ಮಾಡಿದ್ದರು, ತಮಿಳುನಾಡು ಸರ್ಕಾರ ಸಹಕಾರ ನೀಡಿಲ್ಲ, ನೀಡೋದು ಇಲ್ಲ, ಇದು ಎಲ್ಲರಿಗೂ ಗೊತ್ತಿದೆ. ವ್ಯರ್ಥ ಮಾತುಕತೆ ಆಗಬಾರದು. ನಮ್ಮ ವಸ್ತುಸ್ಥಿತಿ ಮಾತ್ರವಲ್ಲ ತಮಿಳುನಾಡು ವಸ್ತುಸ್ಥಿತಿ ಬಗ್ಗೆಯೂ ನಮ್ಮ ವಕೀಲರು ಮಾತನಾಡಲ್ಲ. ತಮಿಳುನಾಡಿನ ವಸ್ತುಸ್ಥಿತಿ ಹೇಳಲು ನಾವು ಯಾವಾಗ ಕಲಿಯುತ್ತೇವೋ, ತಮಿಳುನಾಡಿನ ಡ್ಯಾಂಗಳ ಬಗ್ಗೆ ನಮ್ಮ ವಕೀಲರು ಎಲ್ಲಿಯವರೆಗೆ ಮಾತಾಡುವುದಿಲ್ಲವೋ, ಅಲ್ಲಿಯವರೆಗೂ ಸಮಸ್ಯೆ ಪರಿಹಾರ ಆಗುವುದಿಲ್ಲ. ಇಕ್ಕಟ್ಟಿಗೆ ಸಿಲುಕಿಸುವುದರಿಂದ ನನಗೆ ಏನೂ ಲಾಭ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ಹೇಳಿದ್ದೇನೆ ಎಂದರು.