ಕರ್ನಾಟಕ

karnataka

ETV Bharat / state

ಲಾರಿ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ: ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ

ಅವೈಜ್ಞಾನಿಕವಾಗಿರುವ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ನಾವು ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕ ಲಾರಿ ಓನರ್ಸ್​ ಆ್ಯಂಡ್​ ಏಜೆಂಟ್ಸ್​ ಅಸೋಸಿಯೇಷನ್​ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.

Karnataka Lorry owners and Agents Association Pressmeet
ಕರ್ನಾಟಕ ಲಾರಿ ಓನರ್ಸ್ ಆ್ಯಂಡ್ ಏಜೆಂಟ್ಸ್ ಅಸೋಸಿಯೇಷನ್ ಸುದ್ದಿಗೋಷ್ಠಿ

By ETV Bharat Karnataka Team

Published : Jan 13, 2024, 7:42 AM IST

Updated : Jan 13, 2024, 8:27 AM IST

ಬೆಂಗಳೂರು: "ಕೆಲ ಸಂಘಟನೆಗಳು ಜನವರಿ 17 ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಅವೈಜ್ಞಾನಿಕವಾಗಿದ್ದು, ಇದಕ್ಕೆ ನಮ್ಮ ಬೆಂಬಲವಿಲ್ಲ" ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಆ್ಯಂಡ್​ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ ಹೇಳಿದರು.

ಶುಕ್ರವಾರ ನಗರದ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ ತಂದಿರುವ ಹಿಟ್ ಆ್ಯಂಡ್ ರನ್ ಹೊಸ ಕಾನೂನಿನ ಕುರಿತು ತಪ್ಪು ಮಾಹಿತಿ ಮತ್ತು ದುರುದ್ದೇಶಪೂರಿತ ಪ್ರಚಾರದ ಮೂಲಕ ಚಾಲಕರನ್ನು ಪ್ರಚೋದಿಸಿ ಮತ್ತು ಮುಷ್ಕರಕ್ಕೆ ಕರೆ ನೀಡಿ ಅಶಾಂತಿಯನ್ನು ಹುಟ್ಟುಹಾಕಲಾಗುತ್ತಿದೆ. ರಾಜ್ಯ ಮತ್ತು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳನ್ನು ಬಹಿರಂಗಪಡಿಸಬೇಕಿದೆ" ಎಂದು ಹೇಳಿದರು.

"ಚಾಲಕರ ಭಾವನೆಯನ್ನು ಕುಶಲತೆಯಿಂದ ನಿರ್ವಹಿಸುವ ಸಂಘಟಿತ ಪ್ರಯತ್ನವು ತಪ್ಪುದಾರಿಗೆ ಕಾರಣವಾಗುತ್ತಿರುವುದು ಮಾತ್ರವಲ್ಲದೆ ಅಗತ್ಯ ಸೇವೆಗಳ ಸಾಮಾನ್ಯ ಕಾರ್ಯನಿರ್ವಹಣೆಗೂ ಅಡ್ಡಿಪಡಿಸುವ ಸಾಮರ್ಥ್ಯ ಹೊಂದಿದೆ. ಅನಗತ್ಯ ಅವ್ಯವಸ್ಥೆಯನ್ನು ಸೃಷ್ಟಿಸಲಿದೆ. ಮತ್ತು ಆಂತರಿಕ ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡಲಿದೆ. ನಮ್ಮ ಚಾಲಕರ ಸಹೋದರರಿಗೆ ಅಶಾಂತಿ ಮತ್ತು ಅಸಮಾಧಾನಕ್ಕೆ ಕಾರಣವಾದ ಘಟನೆಗಳ ತಿರುವುಗಳನ್ನು ಗಮನಕ್ಕೆ ತರಬೇಕಿದೆ." ಎಂದರು.

"ಸೆಕ್ಷನ್ 106 (2)ರ ಅಡಿಯಲ್ಲಿ ಹಿಟ್ ಆ್ಯಂಡ್​ ರನ್ ಕೇಸ್‌ಗೆ ಸಂಬಂಧಿಸಿದ ನಿಬಂಧನೆಗೆ ಸರ್ಕಾರವು ಲಿಖಿತವಾಗಿ ಭರವಸೆ ನೀಡಿದೆ. ಭಾರತೀಯ ನ್ಯಾಯ ಸಂಹಿತಾ (ದ್ವಿತೀಯ) 2023 ಅನ್ನು ಕಾರ್ಯಗತಗೊಳಿಸಲಾಗಿಲ್ಲ. ಮತ್ತು ಅದರ ಬಗ್ಗೆ ಯಾವುದೇ ನಿರ್ಧಾರವನ್ನು ಚರ್ಚೆಯ ನಂತರ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಹೀಗಾಗಿ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಸಮಾಜ ವಿರೋಧಿಗಳ ವದಂತಿಗಳು ಮತ್ತು ತಪ್ಪು ಮಾಹಿತಿಯ ಪ್ರಚಾರವನ್ನು ತಗ್ಗಿಸಬೇಕಿದೆ" ಎಂದು ಹೇಳಿದರು.

"ಅಪಘಾತ ನಡೆಸಿ ಪರಾರಿಯಾದ ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ 7 ಲಕ್ಷ ರೂಪಾಯಿ ದಂಡ ವಿಧಿಸುವ ಕೇಂದ್ರ ಸರ್ಕಾರದ ರಸ್ತೆ ಸಂಚಾರ ಕಾನೂನು ತಿದ್ದುಪಡಿ ವಿರೋಧಿಸಿ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಕೆಲ ಸಂಘಟನೆಗಳು ಹೇಳಿಕೆ ನೀಡಿವೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ನಮ್ಮ ಸಂಘಟನೆ ಮಾತನಾಡಿದ್ದು, ತಿದ್ದುಪಡಿ ವಾಪಸ್‌ ಪಡೆಯುವುದಾಗಿ ಭರವಸೆ ನೀಡಿರುವುದರಿಂದ ಬಂದ್‌ ಅಗತ್ಯವಿಲ್ಲ ಎಂದೆನಿಸುತ್ತದೆ" ಎಂದು ಹೇಳಿದರು.

"ಕೇಂದ್ರ ಸರ್ಕಾರವು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಮಸ್ಯೆ ಪರಿಹರಿಸುವ ವಾಗ್ದಾನ ನೀಡಿದೆ. ಆದ್ದರಿಂದ ಈ ಮುಷ್ಕರದ ಅಗತ್ಯವಿಲ್ಲ. ಮುಷ್ಕರದ ಹೆಸರಿನಲ್ಲಿ ನಮ್ಮಲ್ಲಿ ಒಡಕು ಉಂಟು ಮಾಡುವುದು ಸರಿಯಲ್ಲ. ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಯಾರೂ ಕಿವಿಗೊಡಬಾರದು. ಚಾಲಕರು ಧೈರ್ಯಗುಂದಬಾರದು, ನಮ್ಮ ಬೇಡಿಕೆಗಳು ಈಡೇರಲಿವೆ" ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಕೆ.ಎನ್​.ಅಶ್ವಥ್ ಸೇರಿದಂತೆ ವಿವಿಧ ಲಾರಿ ಮಾಲೀಕರು ಮತ್ತು ಏಜೆಂಟ್​ಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಹಿಟ್​ ಅಂಡ್​ ರನ್ ಕೇಸ್​​ ಶಿಕ್ಷೆ, ದಂಡ ನಿಯಮ ಪರಿಷ್ಕರಣೆ ಭರವಸೆ: ಲಾರಿ ಮಾಲೀಕರ ಮುಷ್ಕರ ಅಂತ್ಯ

Last Updated : Jan 13, 2024, 8:27 AM IST

ABOUT THE AUTHOR

...view details