ಬೆಂಗಳೂರು: ಕೋವಿಡ್ ಕಾರಣಕ್ಕೆ ಪ್ರಸಕ್ತ ನಡೆಯುತ್ತಿರುವ ಪರೀಕ್ಷೆ ಹಾಗೂ ಶೈಕ್ಷಣಿಕ ಚಟುವಟಿಕೆಗಳು ನಿಲ್ಲುವುದಿಲ್ಲ. ನಿಗದಿತ ವೇಳಾಪಟ್ಟಿಯಂತೆ ಎಲ್ಲವೂ ಮುಂದುವರಿಯುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ನಗರದ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಮಟ್ಟದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್, ಡಿಪ್ಲೋಮಾ ಸೇರಿದಂತೆ ಉನ್ನತ ಶಿಕ್ಷಣ ವ್ಯಾಪ್ತಿಗೆ ಬರುವ ಎಲ್ಲಾ ವಿಭಾಗದ ಪರೀಕ್ಷೆಗಳು ಯಥಾವತ್ ನಡೆಯುತ್ತವೆ. ಯಾವ ಬದಲಾವಣೆಯೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷ ನಿಲ್ಲುವುದಿಲ್ಲ:ಮುಂದಿನ ವರ್ಷ, ಅಂದರೆ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಯಾವ ಚಟುವಟಿಕೆಗಳಲ್ಲೂ ವ್ಯತ್ಯಯ ಆಗುವುದಿಲ್ಲ. ಪರೀಕ್ಷೆಗಳು ಮುಗಿದ ನಂತರ ಬೇಸಿಗೆ ರಜೆಗಳು ಇರುವುದಿಲ್ಲ, ತರಗತಿಗಳು ಆರಂಭವಾಗುತ್ತವೆ. ಆಫ್‌ಲೈನ್ ಮತ್ತು ಆನ್‌ಲೈನ್ ತರಗತಿಗಳು ನಡೆಯಲಿವೆ. ಮೊದಲು ಆನ್‌ಲೈನ್ ತರಗತಿಗಳು ಆರಂಭವಾಗುತ್ತವೆ. ವಿದ್ಯಾರ್ಥಿಗಳು ಎರಡರ ಪೈಕಿ ಒಂದಕ್ಕೆ ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ. ಯಾರು ಕಾಲೇಜಿಗೆ ಬರುತ್ತಾರೋ ಅವರ ಸುರಕ್ಷತೆಗೆ ಕಾಲೇಜಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳಲಾಗುವುದು. ತರಗತಿ ಕೊಠಡಿಗಳ ಸ್ಯಾನಿಟೈಸೇಷನ್, ಸ್ವಚ್ಛತೆ, ಕೋವಿಡ್ ಪರೀಕ್ಷೆ, ದೈಹಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.