ಬೆಂಗಳೂರು: ಕಾಂಗ್ರೆಸ್ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಭೇಟಿ ಹಿಂದೆ ಯಾವುದೇ ರೀತಿಯ ರಾಜಕೀಯದ ಕಾರಣಗಳಿಲ್ಲ, ಇದರಲ್ಲಿ ರಾಜಕಾರಣ ಬೆರೆಸುವ ಅಗತ್ಯವೂ ಇಲ್ಲ, ನನ್ನ ರಾಜಕೀಯ ನಿಲುವಿನಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಿಎಂ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಶಾಸಕ ಶಾಮನೂರು ಗುಪ್ತವಾಗಿ ಭೇಟಿಯಾಗಿ ಸಭೆ ಮಾಡಿದ್ದೇಕೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು. ಹಲವಾರು ಬಾರಿ ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕಾರಣ ಬೆರೆಸುವುದು ಸೂಕ್ತವಲ್ಲ. ನಾನು ಶಿಗ್ಗಾಂವಿಯಿಂದ ಬೆಂಗಳೂರಿಗೆ ಬರುವಾಗ ರಾತ್ರಿ ಊಟ ಮಾಡಲು ಹೋಟೆಲ್ಗೆ ಹೋದಾಗ ಅವರು ತಮ್ಮ ಮೊಮ್ಮಕ್ಕಳ ಬಗ್ಗೆ ಹೊಸ ಸಂಬಂಧದ ಕುರಿತು ಚರ್ಚೆ ಮಾಡಲು ಸೇರಿದ್ದರು.
ಆ ಸಂದರ್ಭದಲ್ಲಿ ಅವರ ಜೊತೆಗೆ ಹತ್ತು ನಿಮಿಷ ಉಭಯ ಕುಶಲೊಪರಿ ಮಾತನಾಡಿದ್ದು, ಯಾವುದೇ ರಾಜಕೀಯ ವಿಷಯ ಪ್ರಸ್ತಾಪ ಆಗಿಲ್ಲ. ಸ್ನೇಹ ಸಂಬಂಧಗಳೇ ಬೇರೆ ರಾಜಕೀಯ ಸಂಬಂಧವೇ ಬೇರೆ ನಾನು ನನ್ನ ರಾಜಕೀಯ ನಿಲುವಿನಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಟ್ವೀಟ್ ಮೂಲಕ ಬೊಮ್ಮಾಯಿ ಸ್ಪಷ್ಟೀಕರಣ ನೀಡಿದ್ದಾರೆ.
ಮಾಜಿ ಸಿಎಂ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಶಾಸಕ ಶಾಮನೂರು ಶಿವಶಂಕರಪ್ಪ ಕಳೆದ ಸಂಜೆ ದಾವಣಗೆರೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ದಾವಣಗೆರೆ ಹೊರ ವಲಯದ ಖಾಸಗಿ ಹೋಟೆಲ್ನಲ್ಲಿ ನಿನ್ನೆ ಬೊಮ್ಮಾಯಿ ಹಾಗೂ ಶಿವಶಂಕರಪ್ಪ ಈ ಮಾತುಕತೆ ನಡೆಸಿದ್ದರು. ಆದರೆ ಯಾವ ವಿಚಾರವಾಗಿ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿರಲಿಲ್ಲ. ಇದೀಗ ಆ ಊಹಾಪೋಹಕ್ಕೆ ಮಾಜಿ ಸಿಎಂ ಟ್ವೀಟ್ ಮೂಲಕವೇ ಸ್ಪಷ್ಟನೆ ಕೊಟ್ಟಿದ್ದಾರೆ.
ಸಂಜೆ ಶಿವಶಂಕರಪ್ಪ ಭೇಟಿ ಮಾಡಿದ್ದ ಮಾಜಿ ಸಿಎಂ:ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಆಪ್ತರ ಖಾಸಗಿ ಹೋಟೆಲ್ನಲ್ಲಿ ಸುಮಾರು 25 ನಿಮಿಷಗಳ ಕಾಲ ಸುಧೀರ್ಘ ಚರ್ಚೆ ನಡೆಸಿದ್ದರು.
ಕಾಂಗ್ರೆಸ್, ಬಿಜೆಪಿ ಹಿರಿಯ ನಾಯಕರ ಬಗ್ಗೆ ಸಂಸದ ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆ ಬೆನ್ನಲ್ಲೇ ನಡೆದ ಈ ಭೇಟಿಯ ಬಗ್ಗೆ ರಾಜಕೀಯ ವಲಯದಲ್ಲಿ ಹಲವಾರು ಚರ್ಚೆಗಳು ಎದ್ದಿದ್ದವು. ಇದಲ್ಲದೇ ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರಾಗಿರುವ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಹಿರಂಗಪಡಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿರುವ ಕರಿತಂತೆ ಚರ್ಚೆ ನಡೆದಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಆ ಎಲ್ಲ ಊಹಾಪೋಹಗಳಿಗೆ ಮಾಜಿ ಸಿಎಂ ತೆರೆ ಎಳೆದಿದ್ದು, ಇದೊಂದು ರಾಜಕೀಯೇತರ ಭೇಟಿ, ಇದರಲ್ಲಿ ವಿಶೇಷ ಅರ್ಥ ಕಲ್ಪಿಸಬೇಕಾಗಿರುವುದು ಏನೂ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ, ಕಾಂಗ್ರೆಸ್ ನಾಯಕರು ಹೊಂದಾಣಿಕೆಯಲ್ಲಿದ್ದೀರಾ: ಸಂಸದ ಪ್ರತಾಪ್ ಸಿಂಹ ಪ್ರಶ್ನೆ