ಕರ್ನಾಟಕ

karnataka

ETV Bharat / state

ಎಲೆಕ್ಟ್ರಿಕ್ ವಾಹನಗಳಿಗೆ ರೋಡ್ ಟ್ಯಾಕ್ಸ್ ಇಲ್ಲ: ಡಿಸಿಎಂ‌ ಸವದಿ - ಸಾರಿಗೆ ಸಚಿವ ಲಕ್ಷ್ಮಣ ಸವದಿ

ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಉತ್ತೇಜಿಸಲು ಸರ್ಕಾರ ಸಂಪೂರ್ಣ ರೋಡ್ ಟ್ಯಾಕ್ಸ್ ವಿನಾಯಿತಿ ಘೋಷಿಸಿದೆ ಎಂದು ಸಚಿವರು ತಿಳಿಸಿದರು.

DCM Savadi said
ಡಿಸಿಎಂ‌ ಸವದಿ

By

Published : Mar 9, 2021, 7:40 PM IST

ಬೆಂಗಳೂರು: ಈಗಾಗಲೇ ಎಲೆಕ್ಟ್ರಿಕ್ ಬಸ್‌ಗಳು, ಬ್ಯಾಟರಿ ಆಪರೇಟೆಡ್ ಕಾರುಗಳು, ಆಟೋರಿಕ್ಷಾಗಳು ಮತ್ತು ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಉತ್ತೇಜಿಸಲು ಸರ್ಕಾರವು ಅಂತಹ ವಾಹನಗಳಿಗೆ ಸಂಪೂರ್ಣ ರೋಡ್ ಟ್ಯಾಕ್ಸ್ ವಿನಾಯಿತಿ ಘೋಷಿಸಿದೆ. ಇದರ ಪ್ರಯೋಜನವನ್ನು ಹೆಚ್ಚೆಚ್ಚು ಜನರು ಉಪಯೋಗಿಸಿಕೊಳ್ಳಬೇಕೆಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೋರಿದರು.

ನಗರದಲ್ಲಿಂದು ನೂತನವಾಗಿ ಕುಮಾರ್ ಮೋಟರ್ಸ್ ಶೋರೂಂನಲ್ಲಿ ಫಿಜಿಯೋ ವಿದ್ಯುತ್ ಚಾಲಿತ ಆಟೊಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಡಿಸಿಎಂ‌ ಸವದಿ

ಇದನ್ನೂ ಓದಿ: ಜಮೀನು ವಿವಾದ: ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ ರಾಕಿ ಬಾಯ್​​​

ಬೆಂಗಳೂರಿನಲ್ಲಿ ವಾಹನಗಳಿಂದ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ಮಾರಕ ಪರಿಣಾಮ ಉಂಟುಮಾಡುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 1 ಕೋಟಿಗೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಇವುಗಳು ಹೊರಸೂಸುವ ಹೊಗೆಯಲ್ಲಿ ಮಾಲಿನ್ಯ ಉಂಟಾದರೆ ಅವುಗಳಿಂದ ಆಗಬಹುದಾದ ದುಷ್ಪರಿಣಾಮ ಎಷ್ಟೆಂದು ಊಹಿಸುವುದು ಕಷ್ಟವಾಗಿದೆ.

ಕ್ಯಾನ್ಸರ್, ಅಲರ್ಜಿ, ಹೃದಯ ಬೇನೆ, ಅಸ್ತಮಾ ಮುಂತಾದ ಭಯಾನಕ ಕಾಯಿಲೆಗಳು ವಾಯುಮಾಲಿನ್ಯದಿಂದಾಗಿ ವ್ಯಾಪಕವಾಗುತ್ತಿದೆ. ಹಾಗಂತ ವಾಹನಗಳಿಲ್ಲದೆ ನಮಗೆ ಇಂದು ಬದುಕು ಸಾಗಿಸುವುದೇ ಕಷ್ಟವಾಗಿದೆ. ಆದ್ದರಿಂದ ಯಾವುದೇ ವಾಯು ಮಾಲಿನ್ಯವಿಲ್ಲದ ಮತ್ತು ಶಬ್ದ ಮಾಲಿನ್ಯವಿಲ್ಲದ ಎಲೆಕ್ಟ್ರಿಕ್ ವಾಹನಗಳೇ ನಮಗೆ ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡ ಇಂತಹ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಪ್ರಾಯೋಗಿಕ ಸಂಚಾರವನ್ನು ಪರೀಕ್ಷಿಸಲಾಗಿತ್ತು. ಕೇಂದ್ರ ಸರ್ಕಾರದ ನೆರವಿನೊಂದಿಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಅಳವಡಿಸಲು ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಸವದಿ ಹೇಳಿದರು.

ಕೇಂದ್ರದ ವಾಹನ ಗುಜರಿ ನೀತಿ:

15 ವರ್ಷಗಳಿಗಿಂತ ಹಳೆಯದಾದ ವಾಣಿಜ್ಯ ವಾಹನಗಳಿಂದ ಮಾಲಿನ್ಯ ಹೆಚ್ಚುತ್ತದೆ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಳೆಯ ವಾಹನಗಳ ಗುಜರಿ ನೀತಿಯನ್ನು ಜಾರಿಗೆ ತಂದಿದೆ. ಖಾಸಗಿ ವಾಹನಗಳಿಗೆ 20 ವರ್ಷಗಳ ನಂತರ ಗುಜರಿ ನೀತಿಯು ಅನ್ವಯವಾಗಲಿದೆ. ವಾಹನ ಮಾಲೀಕರು ಈ ನೀತಿಯ ಯಶಸ್ವಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ನೆರವು:

ಕೇಂದ್ರ ಸರ್ಕಾರವು ಫೇಮ್-2 ಯೋಜನೆ ಅಡಿಯಲ್ಲಿ ಪ್ರತಿ ಬಸ್ಸಿಗೆ ನೀಡುವ 55 ಲಕ್ಷ ರೂ. ಮತ್ತು ಕರ್ನಾಟಕ ಸರ್ಕಾರವು ನೀಡುವ ರೂ. 33.33 ಲಕ್ಷ (ಪ್ರತಿ ಬಸ್ಸಿಗೆ) ಆರ್ಥಿಕ ಸಹಾಯವನ್ನು ಸಂಯೋಜಿಸಿಕೊಂಡು ಪ್ರತಿ ಬಸ್ಸಿಗೆ ರೂ.88,33 ಲಕ್ಷಗಳಂತೆ (ರೂ.55 ಲಕ್ಷ+ರೂ.33.33) ಪ್ರೋತ್ಸಾಹ ಧನದೊಂದಿಗೆ ಎಲೆಕ್ಟ್ರಿಕ್ ಬಸ್​​​ಗಳ ಸಂಚಾರವನ್ನು ಹಂತಹಂತವಾಗಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರಿನಲ್ಲಿ ವಿವಿಧ ಕಂಪನಿಗಳು ತಾವು ತಯಾರಿಸಿದ ಎಲೆಕ್ಟ್ರಿಕ್ ಬಸ್‌ಗಳನ್ನು ನಿಗದಿತ ಅವಧಿಗೆ ಪ್ರಾಯೋಗಿಕವಾಗಿ ಸಂಚಾರಕ್ಕೆ ಒದಗಿಸಿದ್ದವು. ಇವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಮುಂದೆ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಅನುಮತಿ ನೀಡಲು ನಮ್ಮ ಸರ್ಕಾರ ಉದ್ದೇಶಿಸಿದೆ. ಬಸ್‌ಗಳ ಬಳಕೆಯಿಂದ ಮಾಲಿನ್ಯದ ಪ್ರಮಾಣ ಕಡಿಮೆಯಾಗುವುದಲ್ಲದೇ ಸಾರಿಗೆ ಸಂಸ್ಥೆಗಳಿಗೆ ವೆಚ್ಚದಲ್ಲಿ ಉಳಿತಾಯವೂ ಸಾಧ್ಯವಾಗಲಿದೆ. ಅಷ್ಟೇ ಅಲ್ಲ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವುದಕ್ಕೂ ಸಾಧ್ಯವಾಗಲಿದೆ ಅಂತ ತಿಳಿಸಿದರು.

ರಾಜ್ಯದಲ್ಲಿ ಸುಮಾರು 27,000 ಎಲೆಕ್ಟ್ರಿಕ್ ವಾಹನಗಳ ನೋಂದಣೆ:

ನಮ್ಮ ರಾಜ್ಯದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ನೋಂದಣೆ ಸಂಖ್ಯೆ ಇತ್ತೀಚೆಗೆ ಏರುತ್ತಿರುವುದು ಸಮಾಧಾನಕರ ಬೆಳವಣಿಗೆ, ಈವರೆಗೆ (ಕಳೆದ ಫೆಬ್ರವರಿವರೆಗೆ) ನಮ್ಮ ರಾಜ್ಯದಲ್ಲಿ ಒಟ್ಟು ಸುಮಾರು 27,000 ವಿವಿಧ ಎಲೆಕ್ಟ್ರಿಕ್ ವಾಹನಗಳು ನೋಂದಣೆಯಾಗಿವೆ. ಇವುಗಳಲ್ಲಿ 19,062 ದ್ವಿಚಕ್ರ ವಾಹನಗಳು, 678 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಹಾಗೂ 6,469 ಎಲೆಕ್ಟ್ರಿಕ್ ಕಾರುಗಳು ಸೇರಿವೆ.

ಆದರೆ ಕರ್ನಾಟಕದ ಒಟ್ಟು ವಾಹನಗಳಿಗೆ ಹೋಲಿಸಿದರೆ ಇದು ಕಡಿಮೆಯೇ. ಆದ್ದರಿಂದ ನಮ್ಮ ಸಾರಿಗೆ ಇಲಾಖೆಯೂ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಎಲೆಕ್ಟ್ರಿಕ್ ಚಾರ್ಜಿಂಗ್ ಸೆಂಟರ್‌ಗಳನ್ನು ಹಲವು ಕಡೆಗಳಲ್ಲಿ ಸ್ಥಾಪಿಸಲು ಸರ್ಕಾರ ವ್ಯಾಪಕ ಕ್ರಮ ಕೈಗೊಳ್ಳುತ್ತಿದೆ ಅಂತ ಸಚಿವರು ತಿಳಿಸಿದರು.

ABOUT THE AUTHOR

...view details