ಕರ್ನಾಟಕ

karnataka

ETV Bharat / state

ರಾಗಿಣಿಗಿಲ್ಲ ಬಿಡುಗಡೆ ಭಾಗ್ಯ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ - ಸ್ಯಾಂಡಲ್​ವುಡ್​ ಡ್ರಗ್ಸ್​

ಸ್ಯಾಂಡಲ್​ವುಡ್​​ನಲ್ಲಿನ ಡ್ರಗ್ಸ್​​ ಜಾಲಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಈಗಾಗಲೇ ಪರಪ್ಪನ ಅಗ್ರಹಾರದ ವಾಸ ಅನುಭವಿಸುತ್ತಿದ್ದು, ಜೈಲಿನಿಂದ ಹೊರ ಬರಲು ಜಾಮೀನು ಕೋರಿದ್ದಾರೆ. ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್​​ 19ಕ್ಕೆ ಮುಂದೂಡಿದೆ.

Ragini
ರಾಗಿಣಿ

By

Published : Sep 16, 2020, 1:04 PM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಜಾಲ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 19ಕ್ಕೆ ಮುಂದೂಡಿದೆ.

ಪ್ರಕರಣದಲ್ಲಿ ಜಾಮೀನು ಕೋರಿ ನಟಿ ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಅರ್ಜಿಯನ್ನು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್​​ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿತು. ಈ ವೇಳೆ ಪ್ರಾಸಿಕ್ಯೂಷನ್​ ಪರ ವಕೀಲರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಮನವಿ ಪರಿಗಣಿಸಿದ ನ್ಯಾಯಾಲಯ, ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿತು. ಇದೇ ವೇಳೆ ಇತರೆ ಆರೋಪಿಗಳ ಜಾಮೀನು ಅರ್ಜಿಗಳನ್ನೂ ಇದೇ ಕಾರಣಕ್ಕಾಗಿ ಮುಂದೂಡಿತು.

ವಿಶೇಷ ಕೋರ್ಟ್​ನಲ್ಲಿ ಪ್ರಾಸಿಕ್ಯೂಷನ್ ಪರ ವಾದಿಸಲು ಸರ್ಕಾರ ಹೊಸದಾಗಿ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಿದೆ. ಹೀಗಾಗಿ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶದ ಅಗತ್ಯವಿದೆ. ಹೀಗಾಗಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಮನವಿಯನ್ನು ನ್ಯಾಯಾಲಯ ಪರಿಗಣಿಸಿ ವಿಚಾರಣೆ ಮುಂದೂಡಿದೆ.

ಸ್ಯಾಂಡಲ್​​ವುಡ್​​​ನಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿರುವ ಜಾಲದಲ್ಲಿ ಭಾಗಿಯಾಗಿರುವ ಆರೋಪದಡಿ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ನಟಿ ರಾಗಿಣಿಯನ್ನು ಸೆಪ್ಟಂಬರ್ 4ರಂದು ವಶಕ್ಕೆ ಪಡೆದಿದ್ದರು. ವಿಚಾರಣೆಗೆ ಕರೆದೊಯ್ದ ದಿನವೇ ಪೊಲೀಸರು ಆರೋಪಿ ನಟಿಯನ್ನು ಬಂಧಿಸಿ, ಎಫ್ಐಆರ್ ದಾಖಲಿಸಿದ್ದರು. ನಂತರ ನ್ಯಾಯಾಲಯದ ಅನುಮತಿ ಮೇರೆಗೆ ಎರಡು ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ಸುದೀರ್ಘ 10 ದಿನಗಳ ಕಾಲ ವಿಚಾರಣೆ ನಡೆಸಿದ್ದ ಪೊಲೀಸರು, ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಂದು ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯ ಅದೇ ದಿನ ಆರೋಪಿ ನಟಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು. ಅಂದಿನಿಂದ ನಟಿ ರಾಗಿಣಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾರೆ.

ABOUT THE AUTHOR

...view details