ಕರ್ನಾಟಕ

karnataka

ರಾಜ್ಯದಲ್ಲಿ ಹಿಂದಿ ಹೇರುವ ಪ್ರಶ್ನೆಯೇ ಇಲ್ಲ, ಕನ್ನಡಕ್ಕೂ ಎಲ್ಲ ಸಮ್ಮಾನ ಸಿಗಬೇಕು: ಸಿ ಟಿ ರವಿ

By

Published : Sep 13, 2022, 3:10 PM IST

ಹಿಂದಿ ಹೇರುವ ಪ್ರಶ್ನೆಯೇ ಇಲ್ಲ, ಕನ್ನಡಕ್ಕೆ ಎಲ್ಲ ಗೌರವ ಸಿಗಬೇಕು. ಹಿಂದಿ ದಿವಸ್ ಆಚರಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಸಿ ಟಿ ರವಿ ಪ್ರತಿಕ್ರಿಯೆ.

ಸಿ ಟಿ ರವಿ
ಸಿ ಟಿ ರವಿ

ಬೆಂಗಳೂರು: ರಾಜ್ಯದಲ್ಲಿ ಹಿಂದಿ ಹೇರುವ ಪ್ರಶ್ನೆಯೇ ಇಲ್ಲ. ಹಿಂದಿಗೆ ಸಿಗುವ ಗೌರವ ಕನ್ನಡಕ್ಕೂ ಸಿಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಂದಿಗೆ ಸಿಗುವ ಸಮ್ಮಾ‌ನ ಕನ್ನಡಕ್ಕೂ ಸಿಗಬೇಕು. ಅದಕ್ಕಾಗಿ ಅದನ್ನು ಜೋಡಿಸುವ ಕೆಲಸ ಆಗಬೇಕು.

ಭಾರತದ ಎಲ್ಲ ಭಾಷೆಗಳು ಸಹ ಭಾರತದ ಆತ್ಮ. ಮಾತೃಭಾಷೆಯಲ್ಲೇ ವ್ಯವಹರಿಸಿ, ಮಾತನಾಡಲು ಹೆಮ್ಮೆ ಪಡಿ ಎಂದು ಪ್ರಧಾನಿಗಳೇ ಹೇಳಿದ್ದಾರೆ. ಕೀಳರಿಮೆ ತರುವ ಪ್ರಯತ್ನ ಬ್ರಿಟಿಷ್‌ನವರು ಮಾಡಿದ್ರು, ಈಗ ಕಾಂಗ್ರೆಸ್ ಮಾಡ್ತಾ ಇದಾರೆ. ಹಿಂದಿ ದಿವಸ್ ನಾವು ಪ್ರಾರಂಭ ಮಾಡಿದ್ದಲ್ಲ. ಯಾವ ಪಕ್ಷದ ಬೆಂಬಲದಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದರೋ ಆ ಪಕ್ಷದವರೇ ಹಿಂದಿ ಹೇರಿಕೆ ಮಾಡಿರೋದು ಎಂದು ಆರೋಪಿಸಿದರು.

ಏಕ್ ಭಾರತ್ ಶ್ರೇಷ್ಠ ಭಾರತ್ ಅಂತ ನಮ್ಮ ಪಕ್ಷ ಹೊಸ ಯೋಜನೆ ಜಾರಿ ಮಾಡಿದೆ. ಬೇರೆ ಬೇರೆ ರಾಜ್ಯಗಳ ಉತ್ಸವಗಳನ್ನ ಬೇರೆ ಬೇರೆ ರಾಜ್ಯಗಳಲ್ಲಿ ಮಾಡಬೇಕು. ಭಾಷೆ ಬಾಂಧವ್ಯದ ಸಂಕೇತ ಅಂತಾ ನಾನು ಭಾವಿಸುತ್ತೇನೆ. ಆದರೆ ಕೆಲವರು ಅದನ್ನ ಬೆಂಕಿ ಹಚ್ಚೋಕೆ ಬಳಸುತ್ತಾರೆ. ಬೇರೆ ಬೇರೆ ರಾಜ್ಯಗಳು ಹಾಗೂ ಭಾಷೆಗಳ ಉತ್ಸವ ನಡೆದಾಗ ಸಾಂಸ್ಕೃತಿಕ ಸಂಬಂಧ ಬೆಳೆಯುತ್ತವೆ. ಸ್ವತಂತ್ರ್ಯ ಪೂರ್ವದಲ್ಲಿ ಎಲ್ಲೂ ಭಾಷೆ ವಿಚಾರದಲ್ಲಿ ಗಲಾಟೆಗಳು ಆಗಲಿಲ್ಲ. ಭಾರತ ಜನನಿಯ ತನುಜಾತೆ ಅಂತಾ ಕುವೆಂಪು ಹೇಳಿದ್ದಾರೆ. ಅದನ್ನ ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ತಿಳಿಸಿದರು.

ಅದು ಅವರ ಊರಿನವರೇ ಮಾತನಾಡುವ ಮಾತು:ಸಿದ್ದರಾಮಯ್ಯ ಕಚ್ಚೆ ಹರುಕ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಜನರ ಮಾತು ಅಂತ ಅವರು ಹೇಳಿದ್ರು, ನಾನು ಜನರ ಮಾತು ಅಂತಾ ಹೇಳಿದ್ದೇನೆ. ಮಾತು ಅನ್ನೋದು ಅವರಿಗೆ ಮಾತ್ರ ಬರುವುದಲ್ಲ ನಮಗೂ ಬರುತ್ತೆ. ಕೆಲವರು ಪ್ರಧಾನಿಗಳನ್ನ, ಸ್ವಾಮೀಜಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ.

ಅಂತವರನ್ನ ನಾವು ನೋಡಿದ್ದೇವೆ, ಅವರು ಮಾತನಾಡುವಾಗ ಹುದ್ದೆಗಳು ನೆನಪಾಗುವುದಿಲ್ಲವಾ? ಹೆಚ್.ವಿಶ್ವನಾಥ್ ಅವರು ಸಿದ್ದರಾಮಯ್ಯನವರು ಒಂದೇ ಊರಿನವರು ಎಂದು ಅವರ ಹೆಸರು ಪ್ರಸ್ತಾಪ ಮಾಡಿದ್ದೆ. ಈ ಮುಂಚೆ ವಿಶ್ವನಾಥ್ ಅವರು ಯಾವ ಸಂದರ್ಭದಲ್ಲಿ ಏನು ಹೇಳಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದರು.

ಕಾಂಗ್ರೆಸ್ ಭಾರತೀಯತೆ ಸುಡುವ ಕೆಲಸ ಮಾಡುತ್ತಿದೆ:ಕಾಂಗ್ರೆಸ್ ಟ್ವೀಟ್​​ನಲ್ಲಿ ಆರ್‌ಎಸ್‌ಎಸ್‌ ಚಡ್ಡಿಯನ್ನು ಸುಡುವ ಪೋಸ್ಟ್ ಹಾಕಿದ್ದಾರೆ. ಆ ಮೂಲಕ ಜೋಡೋ ಹೆಸರಿನಲ್ಲಿ ಭಾರತೀಯತೆ ಸುಡೋ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ಒಂದು ರಾಷ್ಟ್ರ ಸೇವೆ ಮಾಡುವ ಸಂಘ. ಬಿನ್‌ಲಾಡೆನ್‌ನನ್ನ ಒಸಮಾಜೀ ಅಂತಾರೆ ಕಾಂಗ್ರೆಸ್. ತುಕ್ಡೆ ಗ್ಯಾಂಗ್‌ಗಳೆಲ್ಲ ಕಾಂಗ್ರೆಸ್ ಸದಸ್ಯತ್ವ ಪಡೆಯುತ್ತಿದ್ದಾರೆ.

ಚಡ್ಡಿ ಸುಟ್ಟವರೆಲ್ಲಾ ಚಡ್ಡಿ ಹಾಕೊಂಡು ಆರ್‌ಎಸ್‌ಎಸ್‌ ಶಾಖೆಗೆ ಬರೋ ದಿನ ದೂರವಿಲ್ಲ. ಕಾಂಗ್ರೆಸ್ ಮನೋಭಾವನೆ ಎಲ್ಲರಿಗೂ ಗೊತ್ತು.‌ ಕಾಂಗ್ರೆಸ್ ಭಾರತೀಯತೆಯನ್ನು ಜೋಡಿಸುವ ಕೆಲಸ ಮಾಡುತ್ತಿಲ್ಲ. ಅವರು ಭಾರತೀಯತೆಯನ್ನು ಸುಡುವ ಕೆಲಸ ಮಾಡುತ್ತಿದ್ದಾರೆ. ಆರ್​ಎಸ್​​ಎಸ್ ಚಡ್ಡಿ ಸುಡಬಹುದು ಆದರೆ ವಿಚಾರ ಸುಡಲು ಸಾಧ್ಯವಿಲ್ಲ. ಆರ್​​ಎಸ್​​ಎಸ್ ಕ್ರಷ್ ಮಾಡುತ್ತೇವೆ ಅಂದವರೇ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆರ್​ಎಸ್​ಎಸ್​​ ಆಹ್ವಾನಿಸಿದ್ದರು ಎಂದು ಹೇಳಿದರು.

(ಇದನ್ನೂ ಓದಿ: ಪುಂಡು ಪೋಕರಿಯಂತೆ ಮಾತಾಡಿದರೆ ಗೌರವ ಉಳಿಯುವುದಿಲ್ಲ.. ಸಿ ಟಿ ರವಿಗೆ ದಿನೇಶ್ ಗುಂಡೂರಾವ್ ಟಾಂಗ್​)

ABOUT THE AUTHOR

...view details