ಬೆಂಗಳೂರು: ಮೃತಪಟ್ಟವರ ಅಂತ್ಯಕ್ರಿಯೆ ವ್ಯವಸ್ಥಿತವಾಗಿ, ಗೌರವಯುತವಾಗಿ ನಡೆಯುವುದಕ್ಕೆ ಸೂಕ್ತ ಅವಕಾಶ ಸಮಾಜದಲ್ಲಿ ಇರಬೇಕು. ವಿಪರ್ಯಾಸವೆಂದರೆ ಹಲವೆಡೆ ಶವಸಂಸ್ಕಾರ ನಡೆಸಲು ನಿಗದಿತ ಸ್ಥಳಗಳೇ ಇಲ್ಲ. ಸ್ಮಶಾನ ಕೊರತೆಯು ಪ್ರಮುಖ ಸಮಸ್ಯೆಗಳಲ್ಲೊಂದಾಗಿದ್ದು, ಸ್ಥಳೀಯ ಆಡಳಿತಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.
ಹಲವು ವರ್ಷಗಳಿಂದ ನಗರದಲ್ಲಿನ ಸ್ಮಶಾನದ ಕೊರತೆ ಬಗ್ಗೆ ನಾಗರಿಕರು ಬಿಬಿಎಂಪಿಗೆ ದೂರು ನೀಡುತ್ತಲೇ ಬಂದಿದ್ದಾರೆ. ಆದರೆ ಪಾಲಿಕೆ ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ. ಕೋವಿಡ್ ಸಮಯದಲ್ಲಂತೂ ಸಮಸ್ಯೆ ಹೇಳತೀರದಾಗಿತ್ತು. ಈವರೆಗೆ 4,454 ಜನರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, ಸ್ಮಶಾನದ ಜಾಗಕ್ಕೆ ಬೇಡಿಕೆ ಹೆಚ್ಚಾಗಿದೆ.
ಈ ಬಗ್ಗೆ ಪಾಲಿಕೆಯು ಸರ್ಕಾರದ ಗಮನಕ್ಕೆ ತಂದಿದ್ದು, ಸರ್ಕಾರ ನಗರದ ಹೊರವಲಯದಲ್ಲಿ ಜಾಗ ಗುರುತಿಸುವಂತೆ ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು. ಈಗಾಗಲೇ ಇದ್ದ ಬೆಂಗಳೂರಿನ ಬಹುತೇಕ ರುದ್ರಭೂಮಿಗಳು ಭರ್ತಿಯಾಗಿವೆ. ಜನರಿಗೆ ಅನಾನುಕೂಲವಾಗುತ್ತಿರುವ ಬಗ್ಗೆ ಬಿಬಿಎಂಪಿಗೆ ಪದೇ-ಪದೆ ದೂರಿನ ಪತ್ರಗಳು ಬಂದ ಕಾರಣ, ಹೊಸ ಸ್ಮಶಾನ ಹಾಗೂ ವಿದ್ಯುತ್ ಚಿತಾಗಾರಗಳನ್ನು ನಗರದ ಹೊರವಲಯ ರಿಂಗ್ ರಸ್ತೆಗಳ ಪಕ್ಕದಲ್ಲಿ ನಿರ್ಮಿಸಲು 25 ಎಕರೆ ಜಾಗ ಮಂಜೂರು ಮಾಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಅದರಂತೆ ನಾಲ್ಕು ಕಡೆಗಳಲ್ಲಿ ಜಾಗ ಮಂಜೂರು ಮಾಡಿರುವ ಸರ್ಕಾರ ಎರಡು ವರ್ಷದೊಳಗೆ ಉದ್ದೇಶಿತ ಕೆಲಸಕ್ಕೆ ಜಾಗವನ್ನು ಉಪಯೋಗಿಸಿಕೊಳ್ಳುವಂತೆ ಪತ್ರ ಬರೆದಿತ್ತು. ಕೆ.ಆರ್. ಪುರ ಹೋಬಳಿ, ದೇವಸಂದ್ರ ಗ್ರಾಮದಲ್ಲಿ ಮೂವತ್ತು ಗುಂಟೆ ಜಾಗ, ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಕುದುರೆಗೆರೆ ಗ್ರಾಮದಲ್ಲಿ ಎರಡು ಎಕರೆ, ಯಲಹಂಕದ ಬಾಗಲೂರು ಗ್ರಾಮದಲ್ಲಿ ಒಂದು ಎಕರೆ, ಶಿವನಪುರದಲ್ಲಿ ಎರಡು ಎಕರೆ, ಉಲ್ಲೇಗೌಡನ ಹಳ್ಳಿಯಲ್ಲಿ ಎರಡು ಎಕರೆ ಜಾಗಗಳನ್ನು ಸ್ಮಶಾನಕ್ಕೆ ಮೀಸಲಾಗಿ ನೀಡಲಾಗಿದೆ. ಕೋವಿಡ್ ಬಳಿಕ 9 ಕಡೆಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ ಸ್ಮಶಾನ ನಿರ್ಮಾಣಕ್ಕೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುವ ಹಂತದಲ್ಲೇ ಇದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸ್ಮಶಾನದ ಜಾಗಕ್ಕೆ ಬೇಲಿ ಹಾಕುವ ಕೆಲಸವೂ ನಡೆದಿಲ್ಲ.