ಬೆಂಗಳೂರು: ಕೋವಿಡ್ ಎರಡನೇ ಅಲೆ ಅಬ್ಬರಕ್ಕೆ ಸಿಲಿಕಾನ್ ಸಿಟಿ ಅಕ್ಷರಶಃ ನಲುಗಿದೆ. ಆಸ್ಪತ್ರೆಗಳು ಕೋವಿಡ್ ಸೋಂಕಿತರಿಂದ ತುಂಬಿವೆ. ಸೋಂಕಿತರ ಸಂಬಂಧಿಕರಿಂದ ಆಸ್ಪತ್ರೆಗಳಿಗೆ ಅಲೆದಾಟ ಮುಂದುವರೆದಿದೆ. ಬೆಡ್‌ನಿಂದ ಹಿಡಿದು ಚಿಕಿತ್ಸೆಯ ಎಲ್ಲಾ ಹಂತದವರೆಗೂ ಸೋಂಕಿತರ ಕುಟುಂಬಸ್ಥರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ತಪ್ಪಿದ್ದು, ಆರೋಗ್ಯ ಇಲಾಖೆ ಲಾಕ್ಡೌನ್ನಲ್ಲೂ ಸೋಂಕು ನಿಯಂತ್ರಣಕ್ಕೆ ಸರ್ಕಸ್ ನಡೆಸುತ್ತಿದೆ. ಮಹಾನಗರದಲ್ಲಿ 15 ಸರ್ಕಾರಿ ಆಸ್ಪತ್ರೆ, 4 ಸರ್ಕಾರಿ ಮೆಡಿಕಲ್ ಕಾಲೇಜು, 141 ಖಾಸಗಿ ಆಸ್ಪತ್ರೆಗಳು ಹಾಗು 12 ಖಾಸಗಿ ಮೆಡಿಕಲ್ ಕಾಲೇಜು ಸೇರಿ ಒಟ್ಟು 172 ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 26 ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿದೆ.
ಬೆಡ್ ಸಮಸ್ಯೆ:
ಇತ್ತೀಚಿನ ಮಾಹಿತಿ ಪ್ರಕಾರ, ಸರ್ಕಾರಿ ಆಸ್ಪತ್ರೆಯ 1,027 ಬೆಡ್ಗಳಲ್ಲಿ 196 ಬೆಡ್ಗಳು ಖಾಲಿ ಇದೆ. ಸರ್ಕಾರಿ ಮೆಡಿಕಲ್ ಕಾಲೇಜಿನ 880 ಬೆಡ್ಗಳಲ್ಲಿ 61ಬೆಡ್ಗಳು ಖಾಲಿ ಇವೆ. ಖಾಸಗಿ ಆಸ್ಪತ್ರೆಯ 4,629 ಬೆಡ್ಗಳಲ್ಲಿ 645 ಬೆಡ್ ಖಾಲಿ ಇವೆ. ಖಾಸಗಿ ಮೆಡಿಕಲ್ ಕಾಲೇಜಿನ 6,678 ಬೆಡ್ಗಳಲ್ಲಿ 2,944 ಬೆಡ್ಗಳು ಖಾಲಿ ಇವೆ. ಸದ್ಯದ ಮಟ್ಟಿಗೆ ಬೆಡ್ಗಳ ಕೊರತೆ ತಗ್ಗಿದ್ದು, 13,214 ಬೆಡ್ಗಳಲ್ಲಿ 3,846 ಬೆಡ್ಗಳು ಖಾಲಿ ಇವೆ. ಲಾಕ್ಡೌನ್ ಬಳಿಕ ಗುಣಮುಖರಾಗುತ್ತಿರುವವರ ಸಂಖ್ಯೆಯಿಂದಾಗಿ ಬೆಡ್ ಸಮಸ್ಯೆ ಕಡಿಮೆಯಾಗಿದೆ. ಆದರೂ ಐಸಿಯು ಬೆಡ್ ಹಾಗು ವೆಂಟಿಲೇಟರ್ ಸಮಸ್ಯೆ ಇನ್ನೂ ಹಾಗೆಯೇ ಮುಂದುವರೆದಿದೆ. ಆದರೆ ಆಕ್ಸಿಜನ್ ಸಮಸ್ಯೆ ತಾತ್ಕಾಲಿಕ ಶಮನ ಕಂಡಿದೆ.
ರೋಗ ಲಕ್ಷಣಗಳು ಹೊಂದಿದ ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಸರ್ಕಾರಿ ಹಾಗು ಬಿಬಿಎಂಪಿ ಶಿಫಾರಸು ಪಡೆದವರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಸೋಂಕಿತರ ಕುಟುಂಬ ಸದಸ್ಯರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಪರಿಗಣಿಸಿ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕಿತ ವ್ಯಕ್ತಿಯ ನೆರ ಹೊರೆಯವರು ದ್ವಿತೀಯ ಸಂಪರ್ಕಿತರಾಗುತ್ತಿದ್ದು ಅವರಿಗೂ ಕೆಲ ದಿನಗಳ ಕಾಲ ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗುತ್ತಿದೆ. ಹೀಗಾಗಿ ಸೋಂಕಿತರ ಕುಟುಂಬ ಸದಸ್ಯರು ಹಾಗು ನೆರೆ ಹೊರೆಯವರಿಗೆ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡುವ ಅವಕಾಶ ನಿರ್ಬಂಧಿಸಲಾಗಿದೆ. ಸೋಂಕಿತ ವ್ಯಕ್ತಿಯ ಉಪಚಾರಕ್ಕಾಗಿ ಕುಟುಂಬ ಸದಸ್ಯರಿಗೆ ಅವಕಾಶ ನಿರಾಕರಿಸಲಾಗುತ್ತಿದೆ.
ಸೋಂಕಿತರ ಸಂಬಂಧಿಕರ ಭೇಟಿ:
ಇನ್ನು ಬೇರೆ ಮನೆಯಲ್ಲಿ ವಾಸವಾಗಿರುವ ಸೋಂಕಿತರ ಸಂಬಂಧಿಕರು ಸೋಂಕಿತ ವ್ಯಕ್ತಿ ದಾಖಲಾಗಿರುವ ಆಸ್ಪತ್ರೆಗಳಿಗೆ ಅಲೆದಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಲಾಕ್ಡೌನ್ ಇದ್ದರೂ ಆಸ್ಪತ್ರೆಗಳಿಗೆ ತೆರಳಲು ಯಾವುದೇ ನಿರ್ಬಂಧ ಇಲ್ಲದ ಕಾರಣ ಸಂಬಂಧಿಕರು ಪ್ರತಿ ದಿನ ಕೋವಿಡ್ ಆಸ್ಪತ್ರೆ ಆವರಣಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಕೋವಿಡ್ ವಾರ್ಡ್ಗಳಿಗೆ ಅವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ದಿನ ನಿತ್ಯ ಅವರು ಆಸ್ಪತ್ರೆ ಆವರಣದಲ್ಲೇ ಕಾಲ ಕಳೆಯುತ್ತಾರೆ. ಸಾಮಾನ್ಯವಾಗಿ ಬಿಬಿಎಂಪಿ ವ್ಯಾಪ್ತಿಯವರೇ ಚಿಕಿತ್ಸೆಗೆ ದಾಖಲಾಗುವ ಕಾರಣಕ್ಕೆ ಸ್ಥಳೀಯವಾಗಿಯೇ ಲಭ್ಯರಿರುವ ಸಂಬಂಧಿಕರು ಆಸ್ಪತ್ರೆಗೆ ಬಂದಿರುತ್ತಾರೆ. ಊಟ, ಉಪಹಾರ ಎಲ್ಲವನ್ನೂ ಮನೆಯಿಂದಲೇ ತರಬೇಕಾದ ಅನಿವಾರ್ಯತೆ ಇದೆ. ಲಾಕ್ಡೌನ್ ಕಾರಣಕ್ಕೆ ಸಣ್ಣ ಪುಟ್ಟ ಹೋಟೆಲ್ಗಳು ಮುಚ್ಚಿದ್ದು ಬೆರಳೆಣಿಕೆಯಷ್ಟು ಹೋಟೆಲ್ ಮಾತ್ರ ಪಾರ್ಸೆಲ್ ಸೇವೆ ನೀಡುತ್ತಿವೆ. ಆದರೂ ಅಲ್ಲಿ ದುಬಾರಿ ದರ ವಿಧಿಸುತ್ತಿರುವ ಕಾರಣಕ್ಕೆ ಬಡವರು, ಮಧ್ಯಮ ವರ್ಗದ ಜನರಿಗೆ ಊಟ, ಉಪಹಾರಕ್ಕೆ ಹೋಟೆಲ್ ಮೇಲೆ ಅವಲಂಬಿಸಲು ಕಷ್ಟವಾಗಿದೆ ಎನ್ನುವುದು ಸೋಂಕಿತ ವ್ಯಕ್ತಿಯ ಸಂಬಂಧಿಕರ ಅಭಿಪ್ರಾಯವಾಗಿದೆ.
ಸೋಂಕಿತರು 10-20 ದಿನದವರೆಗೂ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸಂಬಂಧಿಕರು ಪ್ರತಿ ದಿನವೂ ಮನೆಗೂ ಆಸ್ಪತ್ರೆಗೂ ಓಡಾಡುವ ಕಾರಣ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಸ್ವಂತ ವಾಹನ ಇದ್ದವರಿಗೆ ಈ ಸಮಸ್ಯೆ ಇಲ್ಲದೇ ಇದ್ದರೂ ವಾಹನ ಇಲ್ಲದವರಿಗೆ ಬಾಡಿಗೆ ವಾಹನದಲ್ಲಿ ಸಂಚರಿಸಲು ತುಸು ಹೆಚ್ಚು ಹಣ ವ್ಯಯಿಸಬೇಕಾಗಿದೆ ಎಂದು ಸೋಂಕಿತರ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.