ಬೆಂಗಳೂರು: ನಾನು ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದೇನೆ. ಪಕ್ಷದ ಅಧ್ಯಕ್ಷರು ಮತ್ತು ಸಿಎಂ ಅವರು ಬ್ಯುಜಿಯಾಗಿದ್ದು, ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಿ ಪಕ್ಷ ಸೇರ್ಪಡೆಯಾಗಲಿದ್ದೇನೆ ಎಂದು ಮೂಡಿಗೆರೆಯ ಬಿಜೆಪಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರವಾಗಿ ಮಾತನಾಡಿದ ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ನಮ್ಮ ಕ್ಷೇತ್ರದಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೊರರಾಜ್ಯ ಪ್ರವಾಸದಲ್ಲಿದ್ದಾರೆ. ಅವರು ಬಂದಾಕ್ಷಣ ಸೇರ್ಪಡೆ ದಿನಾಂಕ ನಿಗದಿಯಾಗಲಿದೆ. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮ ಕ್ಷೇತ್ರದಲ್ಲಿ ನನ್ನ ಪಕ್ಷ ಸೇರ್ಪಡೆ ಕಾರ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೂಡಿಗೆರೆಯ ಕೈ ಶಾಸಕಿ ನಯನಾ ಮೋಟಮ್ಮ, ಸ್ಥಳೀಯ ಕೈ ಮುಖಂಡರು ಕುಮಾರಸ್ವಾಮಿ ಪಕ್ಷ ಸೇರ್ಪಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ಪಕ್ಷ ಸೇರ್ಪಡೆ ವಿಳಂಭವಾಗುತ್ತಿದೆ ಎನ್ನಲಾಗುತ್ತಿದೆ.
ಮಹಿಷ ದಸರಾ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೈಸೂರು ಸಂಸದ ಪ್ರತಾಪಸಿಂಹ ವಿಚಾರಧಾರೆಯನ್ನು ಖಂಡಿಸಿದರು. ಮಹಿಷ ನಮ್ಮ ಕುಲದ ನಾಯಕ, ದಲಿತ ಹಿಂದುಳಿದ ಸಮುದಾಯಗಳ ಸ್ವಾಭಿಮಾನದ ಪ್ರತೀಕ. ಇಲ್ಲಿಯವರೆಗೆ ಅವರು ಹೇಳಿದಂತೆ ಅಸ್ಪೃಷ್ಯರಾಗಿಯೇ ದೇವಸ್ಥಾನದ ಹೊರಗೆ ನಿಂತು ಅವರ ನೀತಿ ನಡವಳಿಕೆ ಪಾಲಿಸಿದ್ದೆವು ಎಂದರು.