ಬೆಂಗಳೂರು : ಕಳೆದ 5 ವರ್ಷಗಳಲ್ಲಿ ಯಾವುದೇ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರ್ಪಡೆಗೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಇಂಧನ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನದಲ್ಲಿ ಖಾಸಗಿ ವಲಯದಲ್ಲಿ ಸಹ ಯಾವುದೇ ಹೊಸ ವಿದ್ಯುತ್ ಖರೀದಿ ಒಪ್ಪಂದಗಳಾಗಿಲ್ಲ. ಛತ್ತೀಸ್‌ಗಢ ಪಿಟ್ ಹೆಡ್ ಪವರ್ ಪ್ಲಾಂಟ್ ಯಾವುದೇ ಪ್ರಗತಿಯನ್ನು ಮಾಡಲಾಗಿಲ್ಲ. ಒಡಿಶಾದಲ್ಲಿರುವ ಮಂದಾಕಿನಿ ಕ್ಯಾಪ್ಟಿವ್ ಗಣಿಯಿಂದ ಕಲ್ಲಿದ್ದಲು ಪಡೆಯಲು ಯಾವುದೇ ಅನುಸರಣೆಯಾಗಿಲ್ಲ ಎಂಬ ಮಾಹಿತಿ ನೀಡಿದರು.
KUSUMC ಅಡಿಯಲ್ಲಿ ಸೌರ ವಿಕೇಂದ್ರೀಕೃತ ಸ್ಥಾವರವನ್ನು 3,37,508 ಪಂಪ್‌ಸೆಟ್‌ಗಳಿಗೆ ಮಂಜೂರು ಮಾಡಲಾಗಿದೆ. ಆದರೆ ಅನುಷ್ಠಾನವಾಗಿಲ್ಲ. 2020-21 ರಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿದ್ದ 7000 ಸಂಖ್ಯೆಯ off grid/Stand-alone ಸೌರ ಪಂಪ್ಗಳ ಅಳವಡಿಕೆಯಾಗಿಲ್ಲ. ಇತರೆ ರಾಜ್ಯಗಳಿಗೆ 1 ಲಕ್ಷ ಪಂಪ್ಗಳ ಹಂಚಿಕೆಯಾಗಿದೆ. ರಾಜ್ಯದ ಪಾಲಾದ 150 MW ವಿದ್ಯುತ್ತನ್ನು ನವದೆಹಲಿಗೆ ಹಂಚಿಕೆ ಮಾಡಲಾಗಿದೆ.
ದೈನಂದಿನ ಬಳಕೆಯು 180 ಮಿಲಿಯನ್ ಯೂನಿಟ್ನಿಂದ 260 ಮಿಲಿಯನ್ ಯೂನಿಟ್ಗಳಿಗೆ ಏರಿಕೆಯಾಗಿದೆ. ಗರಿಷ್ಠ ಹಗಲಿನ ವಿದ್ಯುತ್ ಬೇಡಿಕೆ 11000MW ನಿಂದ 16000MW ಗೆ ಏರಿಕೆಯಾಗಿದೆ (ಮಳೆಗಾಲದಲ್ಲಿ). ಜಲವಿದ್ಯುತ್ ಮತ್ತು ಪವನ ವಿದ್ಯುತ್ ಲಭ್ಯತೆಯಲ್ಲಿನ ಕೊರತೆಯಿಂದಾಗಿ, ರಾತ್ರಿಯ ವೇಳೆಯಲ್ಲಿ ಸುಮಾರು 10,000MW ವಿದ್ಯುತ್ ಕೊರತೆ ಎದುರಿಸಲಾಗುತ್ತಿದೆ. ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿಯೂ ಸಹ ಹೆಚ್ಚಿನ ಬೇಡಿಕೆ ಇದೆ. ಅದರ ಹೊರತಾಗಿಯೂ ರಾಜ್ಯದಿಂದ 1000 ರಿಂದ 1500MW ಖರೀದಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.
ಸದ್ಯದ ವಿದ್ಯುತ್ ಲಭ್ಯತೆ, ಉತ್ಪಾದನೆ ಸ್ಥಿತಿಗತಿ: ಜಲವಿದ್ಯುತ್ ಲಭ್ಯತೆಯಲ್ಲಿ 3000 MU ರಷ್ಟು ಕಡಿಮೆಯಾಗಿದೆ – ಪ್ರತಿ ದಿನಕ್ಕೆ ಸರಾಸರಿ 10MUs. ಜಲವಿದ್ಯುತ್ತನ್ನು ಗರಿಷ್ಠ ಬೇಡಿಕೆ ಪೂರೈಸಲು ಮತ್ತು ವಿದ್ಯುತ್ ಜಾಲದ ನಿರ್ವಹಣೆಗಾಗಿ ಮಾತ್ರ ಬಳಸಲಾಗುತ್ತಿದೆ. ಹೆಚ್ಚಿನ ಬೇಡಿಕೆಯ ಕಾರಣದಿಂದ ಶಾಖೋತ್ಪನ್ನ ಘಟಕಗಳನ್ನು ಮರುಚಾಲನೆಗೊಳಿಸಲಾಗಿದೆ. ನಾಗಪುರ / ರಾಮಗೊಂಡಂ ಪ್ರದೇಶದಲ್ಲಿ ಮಳೆಯಿಂದಾಗಿ ಕಲ್ಲಿದ್ದಲಿನ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಸದರಿ ಸಮಸ್ಯೆಗಳ ಬಗ್ಗೆ ಕಲ್ಲಿದ್ದಲು ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗಿದೆ.
ಅಸ್ತಿತ್ವದಲ್ಲಿರುವ ಎಲ್ಲಾ ಕಲ್ಲಿದ್ದಲು ಸಂಸ್ಥೆಗಳಿಂದ ತಿಂಗಳಿಗೆ 15 ಲಕ್ಷ MT ಪಡೆಯಲು ದಿನವಹಿ ಕ್ರಮವಹಿಸಲಾಗಿದೆ ಹಾಗೂ ನಿಗದಿಯಂತೆ ಪಡೆಯಲಾಗುತ್ತಿದ್ದು, ಪ್ರಸ್ತುತ ಕೊರತೆ ಇಲ್ಲ. ನಿರಂತರ ಪರಿಶ್ರಮದಿಂದ ಸೆಪ್ಟೆಂಬರ್ ತಿಂಗಳಿನಲ್ಲಿ MCL - RSR ನಿಂದ 2 ಲಕ್ಷ MT ಹೆಚ್ಚುವರಿ ಕಲ್ಲಿದ್ದಲು ಪಡೆಯಲಾಗಿದೆ. 2.5 ಲಕ್ಷ ಟನ್ ಆಮದು ಮಾಡಿದ ಕಲ್ಲಿದ್ದಲು ಪಡೆಯಲು ಟೆಂಡರ್ ಮಾಡಲಾಗಿದ್ದು, ಮೌಲ್ಯಮಾಪನ ಮಾಡಲಾಗುತ್ತಿದೆ. ಆಮದು ಕಲ್ಲಿದ್ದಲಿನಲ್ಲಿ high Calorific Value ಇರುವುದರಿಂದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ವರ್ಧಿಸುತ್ತದೆ. ಗುಣಮಟ್ಟವನ್ನು ಸುಧಾರಿಸಲು ತೊಳೆದ ಕಲ್ಲಿದ್ದಲನ್ನು ಪಡೆಯುವ ಪ್ರಸ್ತಾವನೆಯನ್ನು ಸಕ್ರಿಯವಾಗಿ ಪರಿಗಣಿಸಲಾಗುತ್ತಿದೆ.