ಬೆಂಗಳೂರು : ನಾಗಮಂಗಲದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕರೋರ್ವರು ಆತ್ಮಹತ್ಯೆಗೆ ಯತ್ನಿಸಿರುವುದು ರಾಜಕೀಯ ಮತ್ತು ಮಾನಸಿಕ ಒತ್ತಡದಿಂದಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು. ಈ ಕುರಿತ ಸಿಐಡಿ ತನಿಖಾ ವರದಿಯ ವಿವರವನ್ನು ಅವರು ಸದನಕ್ಕೆ ನೀಡಿದರು.
ಗುರುವಾರ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್, ಕೆಎಸ್ಆರ್ಟಿಸಿ ಬಸ್ ಬಾಲಕನ ಆತ್ಮಹತ್ಯೆ ಯತ್ನ ಸಂಬಂಧ ಸಿಐಡಿ ತನಿಖಾ ತಂಡ 38 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಇದು ವೈಯಕ್ತಿಕ ಕಾರಣಕ್ಕೆ ನಡೆದ ಆತ್ಮಹತ್ಯೆ ಯತ್ನ. ಯಾವುದೇ ರಾಜಕೀಯ, ಮಾನಸಿಕ ಒತ್ತಡದಿಂದಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ವರ್ಗಾವಣೆ ರದ್ದುಪಡಿಸಲು ಒತ್ತಡ ಹೇರುವ ನಿಟ್ಟಿನಲ್ಲಿ ಕೀಟನಾಶಕ ಸೇವನೆ ಮಾಡಿದ್ದಾರೆ. ಚಾಲಕ ಜಗದೀಶ್ ಹಾಗೂ ಆತ್ಮಹತ್ಯೆ ನೋಟ್ ಬರೆದು ಕೊಟ್ಟ ಚಾಲಕ ನವೀನ್ ಕುಮಾರ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಸಹಾಯಕ ಕಾರ್ಯ ಅಧೀಕ್ಷಕ ಮಂಜುನಾಥ್ ಎಸ್.ಎಲ್ ವಿರುದ್ಧ ಶಿಸ್ತು ಕ್ರಮಕ್ಕೆ ತನಿಖಾ ತಂಡ ಶಿಫಾರಸು ಮಾಡಿದೆ ಎಂದು ತಿಳಿಸಿದರು. ಚಾಲಕ ಇದ್ದ ಆಂಬ್ಯುಲೆನ್ಸ್ ತಡೆದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಸಿಐಡಿ ತಿಳಿಸಿದೆ. ಹಾಗೆಯೇ, ಈ ಬಗ್ಗೆ ಕ್ರಮ ಕೈಗೊಳ್ಳದ ಠಾಣಾಧಿಕಾರಿ ಅಶೋಕ್ ಕುಮಾರ್ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ :ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ : ವಾಗ್ವಾದ, ಧರಣಿ