ಬೆಂಗಳೂರು: ತಮಿಳುನಾಡು ಬಿಳಿಗುಂಡ್ಲು ಬಳಿ ಅಣೆಕಟ್ಟು ಕಟ್ಟಲು ನಮ್ಮ ವಿರೋಧ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಿಳಿಗುಂಡ್ಲು ಬಳಿ ಅಣೆಕಟ್ಟು ಕಟ್ಟಲು ನಮ್ಮ ವಿರೋಧವಿಲ್ಲ: ಸಚಿವ ಡಿಕೆಶಿ - kannadanews
ಬಿಳಿಗುಂಡ್ಲು ಬಳಿ ತಮಿಳುನಾಡು ಸರ್ಕಾರ ಅಣೆಕಟ್ಟು ಕಟ್ಟಲು ನಮ್ಮಿಂದ ಯಾವುದೇ ವಿರೋಧ ಇಲ್ಲವೆಂದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮಂಡ್ಯ ಜಿಲ್ಲೆಯ ರೈತರಿಗೆ ನೀರು ಬಿಡುವುದು ಈಗ ನಮ್ಮ ಕೈಯಲ್ಲಿ ಇಲ್ಲವೆಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು ಬಿಳಿಗುಂಡ್ಲು ಬಳಿ ತಮಿಳುನಾಡು ಅಣೆಕಟ್ಟು ಕಟ್ಟುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಎಲ್ಲಿ ಬೇಕಾದ್ರೂ ಅಣೆಕಟ್ಟು ಕಟ್ಟಲಿ. ಬಿಳಿಗುಂಡ್ಲು ಬಳಿ ಅಣೆಕಟ್ಟು ಕಟ್ಟೋಕೆ ನಮ್ಮ ವಿರೋಧವಿಲ್ಲ. ಅವರಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಸಮುದ್ರಕ್ಕೆ ಹೋಗುವ ನೀರನ್ನು ಬಳಸುವುದಕ್ಕೆ ಯಾವುದೇ ವಿರೋಧ ಇಲ್ಲ ಎಂದು ತಿಳಿಸಿದರು. ಆದರೆ, ಅವರು ನಮ್ಮ ಯೋಜನೆಗೆ ಸಹಕಾರ ನೀಡಬೇಕು. ಈಗಾಗಲೇ ನಾವು ಯೋಜನೆಗೆ ಎಲ್ಲ ಸಿದ್ಧತೆ ನಡೆಸಿದ್ದೇವೆ. ಅದಕ್ಕೆ ತೊಂದರೆ ಮಾಡದಿದ್ದರೆ ಸರಿ ಎಂದು ಇದೇ ವೇಳೆ ಮನವಿ ಮಾಡಿದರು.
ಮಂಡ್ಯದಲ್ಲಿ ಕಬ್ಬು ಹಾಗೂ ಭತ್ತದ ಬೆಳೆಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೀರು ಬಿಡುವುದು ನಮ್ಮ ಕೈಯಲ್ಲಿಲ್ಲ. ಅದನ್ನು ಪ್ರಾಧಿಕಾರವು ನೋಡಿಕೊಳ್ಳಲಿದೆ. ಇಲ್ಲಿಯವರೆಗೆ ರೈತರು ತಮಗೆ ಬೇಕಾದ ಬೆಳೆ ಬೆಳೆಯುತ್ತಿದ್ದರು. ಇನ್ನು ಮೇಲೆ ತಮಗೆ ಇಚ್ಛೆ ಬಂದಂತೆ ಬೆಳೆ ಬೆಳೆಯೋಕೆ ಆಗುವುದಿಲ್ಲ. ನೀರನ್ನು ಆಧರಿಸಿ ಬೆಳೆ ಬೆಳೆಯಬೇಕು. ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು. ರೈತರಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.