ಕರ್ನಾಟಕ

karnataka

ETV Bharat / state

ಬಿಎಸ್​ವೈ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಇಲ್ಲ ಅವಕಾಶ.. - cabinet expansion news

ಕಳೆದ ಎರಡು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮುಸಲ್ಮಾನರಿಗೆ ಅವಕಾಶ ಸಿಕ್ಕಿರಲಿಲ್ಲ. ಈ ಸಾರಿ ಏಳು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವ ಸಂದರ್ಭ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ವಿಧಾನಸಭೆ, ವಿಧಾನಪರಿಷತ್ ನಲ್ಲಾಗಲಿ ಬಿಜೆಪಿಯಿಂದ ಆಯ್ಕೆಯಾದ ಯಾವುದೇ ಮುಸಲ್ಮಾನ್ ಸಮುದಾಯದ ಸದಸ್ಯರು ಇಲ್ಲ..

ಬಿಎಸ್​ವೈ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಇಲ್ಲ ಅವಕಾಶ
ಬಿಎಸ್​ವೈ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಇಲ್ಲ ಅವಕಾಶ

By

Published : Jan 13, 2021, 11:03 PM IST

ಬೆಂಗಳೂರು :ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ಮೂರನೇ ಹಂತದ ಸಂಪುಟ ವಿಸ್ತರಣೆ ಇಂದು ನಡೆದಿದೆ. ಈ ಸಾರಿಯೂ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾಧಾನ್ಯತೆ ಸಿಕ್ಕಿಲ್ಲ.

ಬಿಎಸ್​​ವೈ ಸಂಪುಟದಲ್ಲಿ ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸಿಎಂ ಸೇರಿ 33 ಸಚಿವರ ಪೈಕಿ 20 ಮಂದಿ ಮೇಲ್ವರ್ಗಕ್ಕೆ ಸೇರಿದವರೇ ಆಗಿದ್ದಾರೆ. ಸಂಪುಟ ರಚನೆಯ ಆರಂಭಿಕ ದಿನದಿಂದಲೂ ಮೇಲ್ವರ್ಗಕ್ಕೆ ಮಣೆ ಹಾಕುತ್ತಾ ಹೋಗಿರುವ ಬಿಎಸ್​ವೈ ಸರ್ಕಾರ, ಅಲ್ಪಸಂಖ್ಯಾತ ಸಮುದಾಯವನ್ನೇ ಸಂಪೂರ್ಣ ಕಡೆಗಣಿಸಿದೆ ಎಂಬ ಆರೋಪ ಹೊತ್ತಿದೆ. ಈ ಸಾರಿ ಸಂಪುಟದಲ್ಲಿ ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧ, ಜೈನ ಸೇರಿದಂತೆ ಯಾವುದೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ.

2008ರಲ್ಲಿ ಸರ್ಕಾರ ರಚನೆ ಮಾಡಿದ ಬಿಎಸ್‌ವೈ ಸಂಪುಟದಲ್ಲಿ ಮುಮ್ತಾಜ್ ಅಲಿಖಾನ್ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ನಂತರ ಸಚಿವರನ್ನಾಗಿ ಮಾಡಲಾಗಿತ್ತು. ಸಂಪುಟದಲ್ಲಿ ಒಬ್ಬ ಅಲ್ಪಸಂಖ್ಯಾತ ಮುಸಲ್ಮಾನ್ ಪ್ರತಿನಿಧಿ ಇರಬೇಕೆಂಬ ಕಾರಣಕ್ಕಾಗಿ ಒಂದು ಪ್ರಯತ್ನವನ್ನು ಅಂದು ಮಾಡಲಾಗಿತ್ತು. ಆದರೆ, ಈ ಸಾರಿ ಅಂತಹ ಪ್ರಯತ್ನವನ್ನು ಬಿಜೆಪಿ ಕೈಬಿಟ್ಟಿದೆ.

ವಿಶೇಷ ಅಂದರೆ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಮತವೇ ನಮಗೆ ಅಗತ್ಯವಿಲ್ಲ. ನಮ್ಮ ಗೆಲುವಿಗೆ ಹಿಂದೂಗಳು ಮತ ಹಾಕಿದರೂ ಸಾಕು ಎಂಬ ಹೇಳಿಕೆಯನ್ನು ಕೂಡ ಬಿಜೆಪಿಯಿಂದ ವಿಧಾನಸಭೆ ಹಾಗೂ ಲೋಕಸಭೆಗೆ ಅಭ್ಯರ್ಥಿಗಳಾಗಿ ಕಣಕ್ಕಿಳಿದ ಮುಖಂಡರು ಹೇಳಿಕೆ ನೀಡಿದ್ದರು.

ಮೈಸೂರು ಸಂಸದ ಪ್ರತಾಪ್ ಸಿಂಹ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ, ಮೈಸೂರಿನ ಕೃಷ್ಣರಾಜ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್, ಸಚಿವ ಕೆ ಎಸ್ ಈಶ್ವರಪ್ಪ ಸೇರಿದಂತೆ ಸಾಕಷ್ಟು ಮಂದಿ 2018ರ ವಿಧಾನಸಭೆ 2019ರ ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭ ನಮಗೆ ಮುಸಲ್ಮಾನರ ಮತ ಬೇಡ ಎಂದಿದ್ದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮಿತ್ರಪಕ್ಷಗಳ ಎನ್ ಡಿ ಎ ಮೈತ್ರಿಕೂಟ ಕೂಡ ಹಿಂದುತ್ವವನ್ನು ಹೆಚ್ಚು ಪ್ರತಿಪಾದಿಸುತ್ತಾ ಬಂದಿದ್ದು, ರಾಜ್ಯದಲ್ಲೂ ಪ್ರತಿಫಲಿಸಿದೆ. 2008ರಲ್ಲಿ ಮುಸಲ್ಮಾನರಿಗೆ ತಮ್ಮ ಸಂಪುಟದಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿದ ಬಿ ಎಸ್ ಯಡಿಯೂರಪ್ಪಗೆ ಈ ಸಾರಿ ಅಂತಹ ಯೋಚನೆ ಇದ್ದರು ಜಾರಿಗೆ ತರುವ ಅವಕಾಶಕ್ಕೆ ತಡೆ ಎದುರಾಗಿದೆ ಎನ್ನಲಾಗುತ್ತಿದೆ.

ಕಳೆದ ಎರಡು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮುಸಲ್ಮಾನರಿಗೆ ಅವಕಾಶ ಸಿಕ್ಕಿರಲಿಲ್ಲ. ಈ ಸಾರಿ ಏಳು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವ ಸಂದರ್ಭ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ವಿಧಾನಸಭೆ, ವಿಧಾನಪರಿಷತ್ ನಲ್ಲಾಗಲಿ ಬಿಜೆಪಿಯಿಂದ ಆಯ್ಕೆಯಾದ ಯಾವುದೇ ಮುಸಲ್ಮಾನ್ ಸಮುದಾಯದ ಸದಸ್ಯರು ಇಲ್ಲ.

ತಮ್ಮ ಪಕ್ಷಕ್ಕೆ ಮುಸಲ್ಮಾನ್ ಮತದಾರರು ಒಲವು ತೋರುವುದಿಲ್ಲ ಎಂದು ಅರಿತ ಹಿನ್ನೆಲೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮುಸಲ್ಮಾನ್ ಅಭ್ಯರ್ಥಿಗೆ ಟಿಕೆಟ್ ನೀಡುವ ಕಾರ್ಯ ಆಗಿಲ್ಲ. ವಿಧಾನಪರಿಷತ್ ನಾಮನಿರ್ದೇಶನ ಇಲ್ಲವೇ ಚುನಾವಣೆಗಳಲ್ಲಿಯೂ ಯಾವುದೇ ಮುಸಲ್ಮಾನ್ ಅಭ್ಯರ್ಥಿ ಆಯ್ಕೆಯಾಗಿಲ್ಲ. ಅಲ್ಪಸಂಖ್ಯಾತ ಕಲ್ಯಾಣ ಖಾತೆಯನ್ನು ಶ್ರೀಮಂತ ಪಾಟೀಲ್‌ಗೆ ನೀಡಿದ್ದರೆ, ವಕ್ಫ್ ಹಾಗೂ ಹಜ್ ಖಾತೆಯನ್ನು ಪ್ರಭು ಚೌಹಾಣ್‌ಗೆ ನೀಡಲಾಗಿದೆ.

ಓದಿ:ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ: 'ಕಮಲ'ದಲ್ಲಿ ಅಸಮಾಧಾನದ ಬೇಗುದಿ

ಅಬ್ದುಲ್ ಅಜೀಂ, ಅನ್ವರ್ ಮಾನಿಪ್ಪಾಡಿ ಅಂತಾ ಬೆರಳೆಣಿಕೆಯಷ್ಟು ಮಂದಿ ಮುಸ್ಲಿಂ ಮುಖಂಡರು ಬಿಜೆಪಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಯಾರನ್ನಾದರೂ ವಿಧಾನಪರಿಷತ್ತಿಗೆ ಆಯ್ಕೆಮಾಡಿ ಸಚಿವ ಸ್ಥಾನ ನೀಡಬಹುದು ಎಂದು ಹಲವರು ನಿರೀಕ್ಷಿಸಿದ್ದರು. ಆದರೆ, ಎಷ್ಟೇ ಪ್ರಾತಿನಿಧ್ಯ ನೀಡಿದರೂ ಕಾಂಗ್ರೆಸ್ ಮತಬ್ಯಾಂಕ್ ಆಗಿರುವ ಮುಸ್ಲಿಂ ಸಮುದಾಯ ಬಿಜೆಪಿ ಬೆನ್ನಿಗೆ ನಿಲ್ಲಲು ರಾಜ್ಯದಲ್ಲಿ ಸಿದ್ಧವಿಲ್ಲ ಎನ್ನುವುದು ಬಿಜೆಪಿ ನಾಯಕರಿಗೆ ಅರಿವಾಗಿದೆ. ಈ ಹಿನ್ನೆಲೆ ಮುಸಲ್ಮಾನರಿಗೆ ಪ್ರಾತಿನಿದ್ಯ ನೀಡದಿರಲು ಬಿಜೆಪಿ ತೀರ್ಮಾನಿಸಿದೆ ಎಂಬ ಮಾತು ಕೇಳಿ ಬರುತ್ತಿವೆ.

ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚಿಸಿದ್ದನ್ನು ಹೊರತುಪಡಿಸಿದ್ರೆ ಇದೀಗ ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. 2008ರಲ್ಲಿ ಪೂರ್ಣಪ್ರಮಾಣದ ಸರ್ಕಾರ ರಚನೆ ಮಾಡಿದ ಸಂದರ್ಭ ವಿಧಾನಪರಿಷತ್ ಸದಸ್ಯರಾದ ಮುಮ್ತಾಜ್ ಅಲಿಖಾನ್‌ರನ್ನು ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು.

ಆದರೆ, ಮೂರು ವರ್ಷ ಅಧಿಕಾರ ನಡೆಸಿ ಬಿಎಸ್‌ವೈ ರಾಜೀನಾಮೆ ನೀಡಿದರು. ಆದರೆ, ನಂತರ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದ ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮುಮ್ತಾಜ್ ಅಲಿಖಾನ್‌ರನ್ನು ಕೈಬಿಡಲಾಗಿತ್ತು. ಇದರಿಂದ ಬೇಸರಗೊಂಡ ಅವರು 2013ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದರು.

ಈ ಒಂದು ಅವಕಾಶವನ್ನು ಹೊರತುಪಡಿಸಿದ್ರೆ ಬಿಜೆಪಿ ಸರ್ಕಾರದಲ್ಲಿ ಮುಸಲ್ಮಾನ್ ಸಮುದಾಯಕ್ಕೆ ಮಣೆ ಹಾಕುವ ಕಾರ್ಯ ಆಗಿಲ್ಲ. ಈ ಸಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ಮತ್ತೊಮ್ಮೆ ಮುಸಲ್ಮಾನರಿಗೆ ಅವಕಾಶ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೂರನೇ ಹಂತದ ವಿಸ್ತರಣೆ ಸಂದರ್ಭದಲ್ಲಿಯೂ ಮುಸಲ್ಮಾನರಿಗೆ ಮಣೆ ಹಾಕುವ ಕಾರ್ಯ ಆಗಿಲ್ಲ.

ಈಗ ಒಂದು ಸಚಿವ ಸ್ಥಾನ ಹಾಲಿ ಉಳಿಸಿಕೊಳ್ಳಲಾಗಿದೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಗಮನಿಸಿ ಇಲ್ಲಿ ಪ್ರತಾಪ್ ಗೌಡ ಪಾಟೀಲ್ ಗೆಲುವು ಸಾಧಿಸಿದರೆ ಅವರಿಗಾಗಿ ಸಚಿವ ಸ್ಥಾನ ನೀಡಲು ತೀರ್ಮಾನಿಸಲಾಗಿದೆ. ಅಲ್ಲಿಗೆ ಇನ್ನೂ ಎರಡು ವರ್ಷ ನಾಲ್ಕೂ ತಿಂಗಳ ಕಾಲಾವಧಿ ಈ ಸರ್ಕಾರಕ್ಕೆ ಇದೆ.

ಅಷ್ಟರಲ್ಲಿ ಸಂಪುಟ ಪುನಾರಚನೆ ಆಗುವ ಎಲ್ಲಾ ಸಾಧ್ಯತೆಗಳು ಇದ್ದರೂ ಮುಸಲ್ಮಾನರಿಗೆ ಮಣೆ ಹಾಕುವ ಸಾಧ್ಯತೆ ಬಹಳ ಕಡಿಮೆ ಇದೆ. ಬಿಜೆಪಿ ಸರ್ಕಾರ ಮೇಲ್ವರ್ಗದವರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದ್ದು ಮುಸಲ್ಮಾನರೂ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂಬ ಆರೋಪ ಹೊರುವ ಸ್ಥಿತಿ ಎದುರಾಗಿದೆ.

ABOUT THE AUTHOR

...view details