ಕರ್ನಾಟಕ

karnataka

ETV Bharat / state

ಯಾರೂ ಪಕ್ಷ ಬಿಡಲ್ಲ, ಸಣ್ಣಪುಟ್ಟ ಗೊಂದಲ ಸರಿಪಡಿಸುತ್ತೇವೆ: ಬಿಎಸ್​ವೈ - ಈಟಿವಿ ಭಾರತ್ ಕನ್ನಡ ಸುದ್ದಿ

ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಬಿಜೆಪಿ ಹಿರಿಯ ನಾಯಕ ಬಿ ಎಸ್​ ಯಡಿಯೂರಪ್ಪ
ಬಿಜೆಪಿ ಹಿರಿಯ ನಾಯಕ ಬಿ ಎಸ್​ ಯಡಿಯೂರಪ್ಪ

By

Published : Aug 18, 2023, 10:13 PM IST

ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿಕೆ

ಬೆಂಗಳೂರು : ಎಸ್.ಟಿ.ಸೋಮಶೇಖರ್ ಸೇರಿದಂತೆ ಯಾವೊಬ್ಬ ಬಿಜೆಪಿ ಶಾಸಕನೂ ಬಿಜೆಪಿ ತೊರೆಯುವುದಿಲ್ಲ, ಕಾಂಗ್ರೆಸ್ ಸೇರುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಎಲ್ಲರೂ ಒಟ್ಟಾಗಿದ್ದೇವೆ. ಆಪರೇಷನ್ ಹಸ್ತ ಕೇವಲ ವದಂತಿ ಎಂದು ರಾಜ್ಯ ಬಿಜೆಪಿ ನಾಯಕರು ಪ್ರಕಟಿಸುವ ಮೂಲಕ ಒಗ್ಗಟ್ಟಿನ ಮಂತ್ರಿ ಜಪಿಸಿದ್ದು, ಪಕ್ಷಾಂತರ ವಿಷಯಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಧವಳಗಿರಿಯಲ್ಲಿಂದು ಬೆಂಗಳೂರು ಶಾಸಕರ ಮಹತ್ವದ ಸಭೆ ನಡೆಯಿತು. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಪರೇಷನ್ ಹಸ್ತದ ವಿಷಯವಾಗಿ ಸಾಕಷ್ಟು ಚರ್ಚೆಯಾಯಿತು. ಇಂದಿನ ಸಭೆಯಲ್ಲಿ ಕಾಂಗ್ರೆಸ್​ಗೆ ವಾಪಸಾಗುತ್ತಾರೆ ಎಂದು ಚರ್ಚೆಯಾಗುತ್ತಿರುವ ಎಸ್.ಟಿ.ಸೋಮಶೇಖರ್ ಹಾಗು ಭೈರತಿ ಬಸವರಾಜ ಗೈರಾಗಿದ್ದರೆ, ಗೋಪಾಲಯ್ಯ ಹಾಗೂ ಮುನಿರತ್ನ ಸಭೆಗೆ ಆಗಮಿಸಿದ್ದರು.

ಆಪರೇಷನ್ ಹಸ್ತದ ವದಂತಿ, ಸೋಮಶೇಖರ್​ಗೆ ಆಗಿರುವ ಅಸಮಾಧಾನದ ವಿಷಯದ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ನಂತರ ಸಮಸ್ಯೆ ಪರಿಹರಿಸೋಣ, ಸಣ್ಣಪುಟ್ಟ ಗೊಂದಲ ಸಹಜ ಎನ್ನುವ ನಿರ್ಧಾರಕ್ಕೆ ಬಂದ ಯಡಿಯೂರಪ್ಪ, ಸೋಮಶೇಖರ್ ಹಾಗೂ ಭೈರತಿ ಬಸವರಾಜ ಅವರನ್ನು ಕರೆಸಿ ಮಾತನಾಡಿ ವಿವಾದ ಪರಿಹರಿಸುವ ನಿರ್ಧಾರಕ್ಕೆ ಬಂದರು. ಮುನಿರತ್ನ ಹಾಗು ಗೋಪಾಲಯ್ಯ ಸಭೆಯಲ್ಲೇ ಇದ್ದ ಕಾರಣ ಅವರಲ್ಲಿನ ಗೊಂದಲವನ್ನು ಸಭೆಯಲ್ಲೇ ಪರಿಹರಿಸಿಕೊಂಡರು ಎನ್ನಲಾಗಿದೆ.

ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ಊರಲ್ಲಿ ಇದ್ದವರು ಸಭೆಗೆ ಬಂದಿದ್ದಾರೆ. ದಿಢೀರನೆ ತಿಳಿಸಿದ್ದರಿಂದ ಸಭೆಗೆ ಎಲ್ಲರೂ ಬರಲಾಗಿಲ್ಲ. ಮತ್ತೊಮ್ಮೆ ಎಲ್ಲರೂ ಸೇರಿ ಚರ್ಚೆ ಮಾಡುತ್ತೇವೆ. ಪಕ್ಷ ಬಿಟ್ಟು ಹೋಗುವವರು ಯಾರು ಇಲ್ಲ. ಎಲ್ಲರೂ ಸಹ ನಮ್ಮ ಜೊತೆ ಇದ್ದಾರೆ. ಒಂದಿಬ್ಬರು ಬೇರೆ ಬೇರೆ ಕಾರಣಕ್ಕೆ ಯೋಚನೆ ಮಾಡುತ್ತಿದ್ದಾರೆ. ಅವರನ್ನು ಕರೆಸಿ ಮಾತನಾಡುತ್ತೇವೆ. ನನ್ನ ಪ್ರಕಾರ, ಯಾರೂ ಪಕ್ಷ ಬಿಟ್ಟು ಹೋಗೋದಿಲ್ಲ ಎನ್ನುವ ವಿಶ್ವಾಸವಿದೆ ಎಂದರು.

ನಂತರ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಎಸ್.ಟಿ.ಸೋಮಶೇಖರ್​ ಜೊತೆ ಚರ್ಚೆ ಮಾಡಿದ್ದೇನೆ. ಶಿವರಾಮ ಹೆಬ್ಬಾರ್ ಜೊತೆ ಮಾತನಾಡಿದ್ದೇನೆ. ಎಲ್ಲರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಯಾರೂ ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ. ಸ್ಥಳೀಯವಾಗಿ ಈಗಿರುವ ಸಮಸ್ಯೆಗಳನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗ ಅದಕ್ಕೆ ಪರಿಹಾರವನ್ನು ಕೊಡುತ್ತೇವೆ. ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಇರುತ್ತೇವೆ. ಇದು ಕಾಂಗ್ರೆಸ್​ನವರು ತಮ್ಮ ಮೇಲಿರುವ ಆರೋಪಗಳು, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅವರ ಶಾಸಕರು ದಂಗೆ ಎದ್ದಿರುವುದನ್ನು ತಿರುಚಲು ವಿಷಯಾಂತರ ಮಾಡಲು ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೆ. ಹಾಗಾಗಿ, ಈ ರೀತಿಯ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ನಾವೆಲ್ಲ ಒಟ್ಟಾಗಿದ್ದೇವೆ ಎಂದು ಹೇಳಿದರು.

ಬಳಿಕ ಮಾತನಾಡಿದ ಆರ್.ಅಶೋಕ್, ಪಕ್ಷ ಬಿಡುತ್ತಾರೆ ಎಂದು ನಿಮಗೆ ಯಾರಾದರೂ ಮಾಹಿತಿ ಕೊಟ್ಟಿದ್ದರೆ ದಯವಿಟ್ಟು ಅವರ ಹೆಸರನ್ನು ಬಹಿರಂಗಪಡಿಸಿ. ಸ್ಪಷ್ಟೀಕರಣ ಕೊಟ್ಟರೂ ಗೋಪಾಲಯ್ಯ ಹೋಗುತ್ತಾರೆ. ಮುನಿರತ್ನ ಹೋಗುತ್ತಾರೆ ಎಂದು ಪದೇ ಪದೆ ಮಾಧ್ಯಮಗಳಲ್ಲಿ ಬರುತ್ತಿದೆ. ಯಾರು ಈ ರೀತಿ ಸುದ್ದಿ ಹರಿಬಿಡುತ್ತಿದ್ದಾರೋ ಅವರ ಹೆಸರನ್ನು ಹೇಳಿ. ನಾವು ಬಹಿರಂಗ ಚರ್ಚೆಗೆ ಸಿದ್ಧವಿದ್ದೇವೆ ಎಂದರು.

ಸಿದ್ದರಾಮಯ್ಯ ರಾಜಕೀಯ ಗುರು ಎನ್ನುವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ವಿಶೇಷ ಅರ್ಥ ಬೇಡ. ಈ ಹಿಂದೆ ಕೆಲವರು ಬೊಮ್ಮಾಯಿಯವರನ್ನು ನಮ್ಮ ಗುರು ಎಂದಿದ್ದಾರೆ. ಯಡಿಯೂರಪ್ಪನವರನ್ನು ನಮ್ಮ ಗುರು ಎನ್ನುತ್ತಾರೆ. ರಾಜಕೀಯವೇ ಬೇರೆ, ಗುರುವೇ ಬೇರೆ. ಅಪ್ಪ, ಮಗ, ಅಣ್ಣ, ತಮ್ಮ ಬೇರೆ ಬೇರೆ ಪಕ್ಷದಲ್ಲಿ ಇರುವ ಕಾಲ ಇದು. ಗೋಪಾಲಯ್ಯ ಇದ್ದಾರೆ. ಮುನಿರತ್ನ ಇದ್ದಾರೆ. ಅವರನ್ನೇ ಕೇಳಿ ಸ್ಪಷ್ಟೀಕರಣ ಪಡೆಯಿರಿ. ಕಾಂಗ್ರೆಸ್‌ನವರ ಮಾತು ಕೇಳಬೇಡಿ. ಇಂದೂ ಕೂಡ ಬೆಳಗ್ಗೆಯಿಂದ ಎರಡು ಬಾರಿ ಸೋಮಶೇಖರ್ ನನಗೆ ಕರೆ ಮಾಡಿದ್ದಾರೆ. ನಾನು ಮಾತನಾಡಿದ್ದೇನೆ. ಇಂದಿನ ಸಭೆಗೆ ಬರುವುದಿಲ್ಲ ಎಂದು ಮೊದಲೇ ಮಾಹಿತಿ ತಿಳಿಸಿದರು. ಅನುಮತಿ ಪಡೆದುಕೊಂಡೆ ಗೈರಾಗಿದ್ದಾರೆ. ಬೈರತಿ ಬಸವರಾಜ್ ಊರಲಿಲ್ಲ. ಹಾಗಾಗಿ ಅವರು ಬಂದಿಲ್ಲ. ಬೈರತಿ ಬರುತ್ತಿದ್ದಂತೆ ಅವರಿಬ್ಬರನ್ನೂ ನಾನು ಮಾಧ್ಯಮಗಳ ಮುಂದೆ ನಿಲ್ಲಿಸಿ ಸ್ಪಷ್ಟೀಕರಣ ಕೊಡಿಸುತ್ತೇನೆ ಎಂದರು.

ಈಗ ಘರ್ ವಾಪಸಿ ಎನ್ನುತ್ತಿರುವ ಕಾಂಗ್ರೆಸ್ ಅವರಿಗೆ ಮಾನ ಮರ್ಯಾದೆ ಇದ್ದರೆ 15 ಜನ ಪಕ್ಷ ಬಿಟ್ಟಾಗ ಮಣ್ಣು ತಿನ್ನುತ್ತಿದ್ದರೆ? ಏಕೆ ತಡೆಯಲಿಲ್ಲ? ಈಗ ವಾಪಸ್ ಎಂದು ಹೇಳುತ್ತಿದ್ದಾರೆ. ಅಂದು ಒಂದೇ ಬಾರಿ ಅಷ್ಟು ಜನ ಬಿಟ್ಟು ಹೋಗಿದ್ದರಲ್ಲ. ಆಗ ಏಕೆ ತಡೆಯಲಿಲ್ಲ?. ಆಗ ನೀವೇ ಕಳಿಸಿ ಕೊಟ್ಟಿದ್ದೀರಾ?. ಮೊದಲು 15 ಜನ ಯಾಕೆ ಪಕ್ಷ ಬಿಟ್ಟಿದ್ದರು ಎಂದು ಆತ್ಮಾವಲೋಕನ ಮಾಡಿ. ನಂತರ ಬೇರೆ ಪಕ್ಷದ ಸುದ್ದಿಗೆ ಬನ್ನಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಪಕ್ಷದಲ್ಲಿನ ಗೊಂದಲ ನಿವಾರಣೆಗೆ ಶಾಸಕರ ಜೊತೆ ಬಿಎಸ್​ವೈ ಮಹತ್ವದ ಸಭೆ

ABOUT THE AUTHOR

...view details