ಮುನಿರತ್ನ ಮನಸ್ಥಿತಿಯಲ್ಲೇ ಎಲ್ಲ ಶಾಸಕರಿದ್ದಾರೆ, ಯಾರೂ ಬಿಜೆಪಿ ತೊರೆಯುವುದಿಲ್ಲ: ಆರಗ ಜ್ಞಾನೇಂದ್ರ ಬೆಂಗಳೂರು : ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಯಾವುದೇ ನಾಯಕರು ಪಕ್ಷ ತೊರೆಯುವುದಿಲ್ಲ. ಯಾರೂ ಕೂಡ ಕಾಂಗ್ರೆಸ್ಗೆ ಹೋಗುವುದಿಲ್ಲ. ಈ ಬಗ್ಗೆ ಈಗಾಗಲೇ ಮುನಿರತ್ನ ಸ್ಪಷ್ಟನೆ ನೀಡಿದ್ದು, ಉಳಿದವರ ಮನಸ್ಥಿತಿ ಕೂಡ ಇದೇ ಆಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಹಾಗೂ ಆರ್.ಆರ್.ನಗರ ಶಾಸಕ ಮುನಿರತ್ನ ರಾಜಕೀಯ ನಿವೃತ್ತಿ ಆಗುತ್ತೇನೆಯೇ ಹೊರತು ಕಾಂಗ್ರೆಸ್ ಸೇರಲ್ಲ ಎಂದಿದ್ದಾರೆ. ಮುನಿರತ್ನ ರೀತಿಯಲ್ಲೇ ಎಲ್ಲ ಶಾಸಕರೂ ಇದ್ದಾರೆ, ಎಲ್ಲರ ಮನಸ್ಥಿತಿ ಬಿಜೆಪಿಯಲ್ಲಿ ಇರುವುದೇ ಆಗಿದೆ ಎಂದರು.
ಇದನ್ನೂ ಓದಿ :ಆರಗ ಜ್ಞಾನೇಂದ್ರರಿಗೆ ಬುದ್ಧಿ ಭ್ರಮಣೆಯಾಗಿದೆ, ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು : ಸಚಿವ ಶಿವರಾಜ ತಂಗಡಗಿ
ಕಾಂಗ್ರೆಸ್, ಜೆಡಿಎಸ್ ತೊರೆದು ಬಂದಿದ್ದ ನಾಯಕರಿಗೆ ಬಿಜೆಪಿಯಲ್ಲಿ ಗೌರವ ಸಿಕ್ಕಿದೆ, ನಮ್ಮ ಸರ್ಕಾರದಲ್ಲಿ ಅವರನ್ನು ಸಚಿವರನ್ನಾಗಿಯೂ ಮಾಡಲಾಗಿತ್ತು. ಎಲ್ಲ ಗೌರವ ನೀಡಿ ಗೌರವದಿಂದಲೇ ನಡೆಸಿಕೊಳ್ಳಲಾಗಿದೆ, ಕಾಂಗ್ರೆಸ್ ಮುಳುಗುವ ಹಡಗು, ಅದು ಯಾವಾಗ ಮುಳುಗುತ್ತದೆಯೋ ಗೊತ್ತಿಲ್ಲ, ಅಲ್ಲಿಗೆ ಹೋದರೆ ಕಾಂಗ್ರೆಸ್ ಎನ್ನುವ ಸಮುದ್ರದಲ್ಲಿ ಇವರು ಕಳೆದುಹೋಗುವ ಪರಿಸ್ಥಿತಿ ಇದೆ. ಹಾಗಾಗಿ, ಯಾರೂ ಕಾಂಗ್ರೆಸ್ಗೆ ಹೋಗುವುದಿಲ್ಲ ಎಂದರು.
ಇದನ್ನೂ ಓದಿ :ಆರಗ ಜ್ಞಾನೇಂದ್ರ ವಿರುದ್ಧ ರಾಜ್ಯಾದ್ಯಂತ ಕಪ್ಪು ಮಸಿ ಚಳವಳಿ : ಡಾ.ಬಿ.ಜೆ.ವಿಜಯ್ ಕುಮಾರ್
ಗುತ್ತಿಗೆದಾರರ ವಿಷಯದ ಕುರಿತು ಮಾತನಾಡಿದ ಆರಗ ಜ್ಞಾನೇಂದ್ರ, ಇತ್ತೀಚೆಗೆ ಗುತ್ತಿಗೆದಾರರು ಮಾತನಾಡುವುದನ್ನು ನೋಡಿದರೆ ಅವರು ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಲಿಯವರು ಎನ್ನುವಂತಿದೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಕೆಂಪಣ್ಣ ನೇತೃತ್ವದಲ್ಲಿ ಮಾಡಿದ 40 ಪರ್ಸೆಂಟ್ ಕಮಿಷನ್ ಆರೋಪವನ್ನೇ ಕಾಂಗ್ರೆಸ್ ಎಲ್ಲ ಕಡೆ ಪ್ರಚಾರ ಮಾಡಿತು. ಆದರೆ, ಯಾವುದೇ ದಾಖಲೆ ನೀಡಲಿಲ್ಲ. ಈಗ ಬೆಂಗಳೂರು ಗುತ್ತಿಗೆದಾರರು ಶೇ 15% ಆರೋಪ ಮಾಡುತ್ತಿದ್ದಾರೆ. ಈಗ ಆರೋಪಕ್ಕೆ ಕೆಂಪಣ್ಣ ದಾಖಲೆ ಕೇಳುತ್ತಿದ್ದಾರೆ, ಅಂದು ಅವರು ಮಾಡಿದ್ದ ಆರೋಪಕ್ಕೆ ದಾಖಲೆ ನೀಡದ ಕೆಂಪಣ್ಣ, ಈಗ ಕಾಂಗ್ರೆಸ್ ವಿರುದ್ಧ ಬಂದ ಆರೋಪಕ್ಕೆ ದಾಖಲೆ ಕೇಳುತ್ತಿರುವುದು ಕಾಂಗ್ರೆಸ್ ಕೃಪಾಪೋಷಿತ ಗುತ್ತಿಗೆದಾರರು ಇವರು ಎನ್ನುವುದಕ್ಕೆ ನಿದರ್ಶನವಾಗಿದೆ ಎಂದರು.
ಇದನ್ನೂ ಓದಿ :ಚಲುವರಾಯಸ್ವಾಮಿ ಮಂತ್ರಿಯಾಗಿದ್ದನ್ನು ಕುಮಾರಸ್ವಾಮಿ ಸಹಿಸುತ್ತಿಲ್ಲ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ, ಅಧಿಕಾರಿಯೊಬ್ಬರನ್ನು ಮೊನ್ನೆ ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಯಿತು. ಅವರು ಶಿವಮೊಗ್ಗಕ್ಕೆ ಹೋಗಿ ರಿಪೋರ್ಟ್ ಮಾಡಿಕೊಳ್ಳುವ ಮೊದಲೇ ವರ್ಗಾವಣೆ ರದ್ದಾಗಿದೆ. ಒಬ್ಬ ಸೂಪರಿಂಟೆಂಡೆಂಟ್ ಇಂಜಿನಿಯರ್ ಈ ರೀತಿಯ ವರ್ಗಾವಣೆ ಏನು ತೋರಿಸಲಿದೆ?, ಇದು ಜನವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ :ಆರಗ ತೀರ್ಥಹಳ್ಳಿಗೆ ಕಳಂಕ, ಕ್ಷಮೆ ಸಾಕಾಗಲ್ಲ.. ರಾಜೀನಾಮೆ ಪಡೆಯಬೇಕು : ಕಿಮ್ಮನೆ ರತ್ನಾಕರ್