ಬೆಂಗಳೂರು:ಯಾರೂ ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ನೀಡಲಾದ ವಿಧಾನಸೌಧ ಕಚೇರಿ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ರಮೇಶ್ ಜಾರಕಿಹೊಳಿ ನಿವಾಸಕ್ಕೆ ವಿಜಯೇಂದ್ರ ಹೋಗಿದ್ದರ ಬಗ್ಗೆ ಪ್ರತಿಕ್ರಿಯಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಆರ್.ಅಶೋಕ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ. ಮಾಜಿ ಸಚಿವ ವಿ ಸೋಮಣ್ಣ ಜೊತೆ ಕೂಡ ಮಾತನಾಡುತ್ತೇವೆ. ಸೋಮಣ್ಣ ಕೂಡ ಒಳ್ಳೆಯ ಸಂಘಟಕ. ಮುಂದಿನ ದಿನಗಳಲ್ಲಿ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ಆರ್. ಅಶೋಕ್ ಅವರನ್ನು ಪ್ರತಿಪಕ್ಷ ನಾಯಕ, ವಿಜಯೇಂದ್ರನನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಮಾಜಿ ಸಿಎಂ ಬೊಮ್ಮಾಯಿ ಎಲ್ಲರೂ ಸೇರಿ ಪಕ್ಷವನ್ನು ಮುನ್ನಡೆಸುತ್ತೇವೆ. ಇಂದು ಚುನಾವಣೆ ನಡೆದರು ನಾವು ಗೆಲ್ಲುತ್ತೇವೆ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು. ಜಾತಿ ಗಣತಿ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸರ್ಕಾರ ಏನಂತ ತೀರ್ಮಾನ ಮಾಡಲಿ. ಆಮೇಲೆ ನೋಡೋಣ ಎಂದರು.
ರಾಜಕೀಯ ಲಾಭಕ್ಕಾಗಿ ಜಾತಿಗಣತಿ ಪ್ರಸ್ತಾಪ ಎಂದ ಬೊಮ್ಮಾಯಿ: ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜಕೀಯ ಲಾಭ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜಾತಿ ಜನಗಣತಿಯ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಗೊಂದಲದ ಗೂಡು ಮಾಡಿದ್ದಾರೆ. ಆರಂಭದಲ್ಲಿ ಜಾತಿಗಣತಿ ಅಂದರು, ಆಮೇಲೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ವರದಿ ಅಂದರು. ಸರ್ಕಾರಿ ಆದೇಶದಲ್ಲಿ ಸಾಮಾಜಿಕ ಶೈಕ್ಷಣಿಕ ವರದಿ ಅಂತ ಬರೆದಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದರು.