ಬೆಂಗಳೂರು:ಇಂದು 19 ಜನರ ಕೊರೊನಾ ಪರೀಕ್ಷಾ ವರದಿಗಳು ನೆಗೆಟಿವ್ ಬಂದಿದ್ದು, ಹೊಸದಾಗಿ ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆಗೊಳಿಸಿದೆ.
ಆರೋಗ್ಯ ಇಲಾಖೆಯಿಂದ ಕೊರೊನಾ ಬುಲೆಟಿನ್ ಬಿಡುಗಡೆ ಕಲಬುರಗಿಯಲ್ಲಿ ಮೃತಪಟ್ಟ ವ್ಯಕ್ತಿ ಸೇರಿದಂತೆ 6 ವರದಿಗಳು ಮಾತ್ರ ಕೊರೊನಾ ಪಾಸಿಟಿವ್ ಬಂದಿದ್ದು, ಮೃತ ವ್ಯಕ್ತಿ ಹೊರತುಪಡಿಸಿ ಉಳಿದ ಐವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಇಂದು ಹೊಸದಾಗಿ 220 ಜನರನ್ನು ಅವಲೋಕನೆಗಾಗಿ ಪಟ್ಟಿ ಮಾಡಿದ್ದು, ಈವರೆಗೆ ಅವಲೋಕನೆಗೆ ಒಳಪಟ್ಟವರ ಸಂಖ್ಯೆ 1877 ತಲುಪಿದೆ. ಇಂದು 189 ಜನರನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಿದ್ದು, ಇಲ್ಲಿಯವರೆಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಿದವರ ಸಂಖ್ಯೆ 1495 ತಲುಪಿದೆ ಎಂದು ತಿಳಿಸಲಾಗಿದೆ.
ಆಸ್ಪತ್ರೆಗಳಲ್ಲಿ ಐಸೋಲೇಷನ್ನಲ್ಲಿ ಇಂದು 31 ಜನರನ್ನು ಇರಿಸಿದ್ದು, ಇಲ್ಲಿಯವರೆಗೆ 56 ಜನರನ್ನು ಐಸೋಲೇಷನ್ನಲ್ಲಿ ಇರಿಸಿದಂತಾಗಿದೆ. 131 ಜನರ ಮಾದರಿ ಸಂಗ್ರಹ ಮಾಡಿದ್ದು, ಈವರೆಗೆ 862 ಮಾದರಿ ಸಂಗ್ರಹ ಮಾಡಿದಂತಾಗಿದೆ. 19 ವರದಿಗಳು ಕೊರೊನಾ ನೆಗಟಿವ್ ಬಂದಿದ್ದು, ಈವರೆಗೆ 609 ವರದಿ ನೆಗಟಿವ್ ಬಂದಿದೆ. ಇಂದು ಯಾವುದೇ ವರದಿ ಕೊರೊನಾ ಪಾಸಿಟಿವ್ ಬಂದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 8, ಬೆಂಗಳೂರಿನ ಇತರೆ ಆಸ್ಪತ್ರೆಯಲ್ಲಿ 11, ದಕ್ಷಿಣ ಕನ್ನಡದಲ್ಲಿ 16, ಬಳ್ಳಾರಿ 6, ಚಿಕ್ಕಮಗಳೂರು 1, ಕಲಬುರಗಿ 4, ಕೊಡಗು 1 ಮತ್ತು ಉಡುಪಿಯಲ್ಲಿ 2, ಬೀದರ್ 2, ವಿಜಯಪುರ 2, ಗದಗ 2, ಧಾರವಾಡದಲ್ಲಿ ಒಬ್ಬರು ಸೇರಿ ಒಟ್ಟು 56 ಜನರನ್ನ ಐಸೋಲೇಷನ್ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದು, ಇಂದು 12 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. 31 ಜನರನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈವರೆಗೆ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಂದರುಗಳಲ್ಲಿ ಒಟ್ಟು 1,11,885 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಆತಂಕಕ್ಕೆ ಒಳಗಾಗದೆ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಇಲಾಖೆ ಸಹಕಾರಿ ನೀಡಿ ಎಂದು ಮನವಿ ಮಾಡಿದೆ.