ಬೆಂಗಳೂರು: ಕೋವಿಡ್ ಹೊಸ ತಳಿ ಜೆಎನ್.1 ಬಗ್ಗೆ ರಾಜ್ಯದಲ್ಲಿ ಆತಂಕ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ಈ ವೈರಾಣು ಬಗ್ಗೆ ಆತಂಕ ಬೇಡ, ಆದರೆ ಮುನ್ನೆಚ್ಚರಿಕೆ ಅಗತ್ಯ ಎಂದು ಹೇಳಿದೆ. ಆದ್ದರಿಂದ ಎಲ್ಲರೂ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು ಎಂದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ. ರಾಜ್ಯದಲ್ಲಿ 22 ಮೆಡಿಕಲ್ ಹಾಗು ಎರಡು ಇಎಸ್‍ಐ ಮೆಡಿಕಲ್ ಕಾಲೇಜುಗಳಿವೆ. 8-9 ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಸ್ತಾಪವಿದೆ. ಆರ್ಥಿಕ ಸಂಪನ್ಮೂಲಕ್ಕನುಗುಣವಾಗಿ ಜಿಲ್ಲೆಗೊಂದರಂತೆ ಹಂತಹಂತವಾಗಿ ಮೆಡಿಕಲ್ ಕಾಲೇಜು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ನೇಮಕಾತಿ ನಡೆದಿಲ್ಲ. ಪಿಎಸ್‍ಐ ಸೇರಿದಂತೆ ಕೆಲವು ನೇಮಕಾತಿಗಳು ಅವ್ಯವಹಾರಗಳ ಆರೋಪದಿಂದಾಗಿ ವಿಳಂಬವಾಗಿವೆ. ಸರ್ಕಾರ ಈ ಬಾರಿ ನೇಮಕಾತಿಗೆ ವಿಶೇಷ ಆದ್ಯತೆ ನೀಡಲಿದೆ. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಒತ್ತು ನೀಡಲಾಗುವುದು. ನೇಮಕಾತಿಯಲ್ಲಿ ಪಾರದರ್ಶಕತೆ ತರಲಾಗುವುದು ಎಂದರು.