ಕರ್ನಾಟಕ

karnataka

ETV Bharat / state

ಕನ್ನಡದಲ್ಲಿ ಗೆಜೆಟ್ ಹೊರಡಿಸುವ ಅಗತ್ಯವಿಲ್ಲ: ಕೇಂದ್ರದ ಹೇಳಿಕೆಗೆ ಹೈಕೋರ್ಟ್ ಅಸಮಾಧಾನ - ಕೇಂದ್ರದ ಹೇಳಿಕೆಗೆ ಹೈಕೋರ್ಟ್ ಅಸಮಾಧಾನ

ಕರಡು ಅಧಿಸೂಚನೆಯನ್ನು ಜನರಿಗೆ ತಲುಪಿಸಲು ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸದೇ ಇರುವುದಕ್ಕೆ ಕೇಂದ್ರ ಸರ್ಕಾರ ತಾಂತ್ರಿಕ ಕಾರಣ ನೀಡುತ್ತಿದೆ. ಹೀಗಾಗಿ, ನ್ಯಾಯಾಲಯ ಕೂಡ ತಾಂತ್ರಿಕ ಅಂಶಗಳ ಮೇಲೆಯೇ ಅರ್ಜಿಯನ್ನು ಪರಿಗಣಿಸಲಿದೆ.‌‌

High Court
ಹೈಕೋರ್ಟ್

By

Published : Jul 23, 2020, 8:42 PM IST

ಬೆಂಗಳೂರು:ಕೇಂದ್ರ ಸರ್ಕಾರದ 'ಪರಿಸರ ಪರಿಣಾಮ ಮೌಲ್ಯಮಾಪನ -2020' ಕರಡು ಅಧಿಸೂಚನೆಯನ್ನು ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟಿಸುವ ಅಗತ್ಯವಿಲ್ಲ ಎಂಬ ಕೇಂದ್ರದ ವಾದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಯುನೈಟೆಡ್ ಕನ್ಸರ್ವೇಷನ್ ಮೂವ್ಮೆಂಟ್ ಚಾರಿಟಬಲ್ ಆ್ಯಂಡ್ ವೆಲ್‌ಫೇರ್ ಟ್ರಸ್ಟ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಕೇಂದ್ರ ಸರ್ಕಾರದ‌ ಪರ ವಕೀಲರು ವಾದಿಸಿ, ಪರಿಸರ ಪರಿಣಾಮ ಮೌಲ್ಯಮಾಪನ ಕರಡನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆಯಾದ ಹಿಂದಿ ಮತ್ತು ಇಂಗ್ಲೀಷ್​ನಲ್ಲಿ ಮಾತ್ರ ಹೊರಡಿಸಬಹುದಾಗಿದೆ. ಹೀಗಾಗಿ ರಾಜ್ಯವಾರು ಪ್ರಾದೇಶಿಕ ಭಾಷೆಗಳಲ್ಲಿ ಗೆಜೆಟ್ ಹೊರಡಿಸುವ ಅಗತ್ಯ ಕೇಂದ್ರ ಸರ್ಕಾರಕ್ಕೆ ಇಲ್ಲ. ಇದಕ್ಕೂ ಮುನ್ನ ಆಯಾ ರಾಜ್ಯಗಳ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರಗಳಿಗೆ ಕರಡು ಕಳುಹಿಸಿ, ಸ್ಥಳೀಯ ಭಾಷೆಯಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿತ್ತು ಎಂದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕರಡು ಅಧಿಸೂಚನೆಯನ್ನು ಜನರಿಗೆ ತಲುಪಿಸಲು ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸದೇ ಇರುವುದಕ್ಕೆ ಕೇಂದ್ರ ಸರ್ಕಾರ ತಾಂತ್ರಿಕ ಕಾರಣ ನೀಡುತ್ತಿದೆ. ಹೀಗಾಗಿ, ನ್ಯಾಯಾಲಯ ಕೂಡ ತಾಂತ್ರಿಕ ಅಂಶಗಳ ಮೇಲೆಯೇ ಅರ್ಜಿಯನ್ನು ಪರಿಗಣಿಸಲಿದೆ.‌‌ ಕರಡು ಅಧಿಸೂಚನೆ ಕೈಗಾರಿಕೆಗಳು ಮತ್ತು ಜನ ಸಾಮಾನ್ಯರ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರುವಂತೆ ಕಾಣುತ್ತಿದೆ. ಹಾಗಿದ್ದೂ, ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ವಿಧಿಸಿರುವ ಗಡುವು ವಿಸ್ತರಿಸಲು ಕೇಂದ್ರ ಈವರೆಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅರ್ಜಿದಾರರು ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕೆಂದು ಮಾಡಿರುವ ಮಧ್ಯಂತರ ಮನವಿಯನ್ನು ಆಗಸ್ಟ್ 5ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದ್ದೇವೆ ಎಂದು ತಿಳಿಸಿ, ವಿಚಾರಣೆ ಮುಂದೂಡಿ‌ತು.

ABOUT THE AUTHOR

...view details