ಬೆಂಗಳೂರು: ಮಂಡಳಿ ನಿರ್ದೇಶಕರು ಹಾಗೂ ಕಾಫಿ ಡೇ ಕುಟಂಬದವರಿಗೆ ಎಂದು ನಮೂದು ಮಾಡಿ ಸಿದ್ದಾರ್ಥ್ ಹೆಗ್ಡೆ ಬರೆದಿರುವ ಪತ್ರದ ಸಾರಾಂಶ ಇಲ್ಲಿದೆ.
37 ವರ್ಷಗಳ ಸತತ ಶ್ರಮದ ಫಲವಾಗಿ ಕಾಫಿ ಡೇ ಹಾಗೂ ಅದರ ಸಹಭಾಗಿತ್ವದ ಕಂಪನಿಗಳಲ್ಲಿ 30 ಸಾವಿರ ಉದ್ಯೋಗಗಳ ಸೃಷ್ಟಿ ಮಾಡಲಾಯಿತು. ತಾಂತ್ರಿಕ ವಿಭಾಗದಲ್ಲೂ 20 ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ಕಂಪನಿಯ ದೊಡ್ಡ ಶೇರ್ ಹೋಲ್ಡರ್ ಆಗಿ ನಾನು ಎಷ್ಟೇ ಶ್ರಮ ಹಾಕಿದರೂ ಕಾಫಿ ಡೇ ಅನ್ನು ಒಂದು ಲಾಭದಾಯಕ ಉದ್ಯಮವನ್ನಾಗಿ ಮಾಡಲು ವಿಫಲವಾಗಿದ್ದೇನೆ.
ನಾನು ಸೋತಿದ್ದೇನೆ. ನನ್ನ ಮೇಲೆ ಜನ ಇಟ್ಟಿದ್ದ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಹಳ ಕಾಲದಿಂದ ನಡೆಸುತ್ತಿದ್ದ ಹೋರಾಟ ಇಂದು ಮುಗಿದಿದೆ. ಇನ್ನು ಯಾವುದೇ ಒತ್ತಡಗಳನ್ನು ತೆಗೆದುಕೊಳ್ಳಲು ನಾನು ಇಚ್ಛಿಸುವುದಿಲ್ಲ. ನನ್ನ ಪಾಲುದಾರ ಕಂಪನಿಗಳು, ಶೇರ್ಗಳನ್ನು ವಾಪಸ್ ಪಡೆಯುವಂತೆ ಒತ್ತಡ ಹಾಕುತ್ತಿವೆ. ಕಂಪನಿ ಮೇಲೆತ್ತಲು 6 ತಿಂಗಳ ಹಿಂದೆ ನನ್ನ ಸ್ನೇಹಿತನೊಬ್ಬನಿಂದ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆದಿದ್ದೆ. ಆದರೂ ಕೂಡ ಕಾಫಿಡೇ ಉದ್ಯಮವನ್ನ ಇನ್ನಷ್ಟು ಲಾಭದಾಯಕ ಹಾದಿಯಲ್ಲಿ ತೆಗೆದುಕೊಂಡು ಹೋಗಲು ಒತ್ತಡಗಳು ಹೆಚ್ಚಾದವು. ಆದಾಯ ತೆರಿಗೆ ವಿಭಾಗದ ಈ ಹಿಂದಿನ ಡಿಜಿಯಿಂದ ಬಹಳಷ್ಟು ಕಿರುಕುಳ ಅನುಭವಿಸಿದ್ದೇನೆ.