ಬೆಂಗಳೂರು:ನಿನ್ನೆ ತಡರಾತ್ರಿಯವರೆಗೂ ನಡೆದ ಸಭೆ ಬೆಳಗ್ಗೆಯೂ ಮುಂದುವರೆದಿದ್ದು, ಶಾಸಕ ಮುನಿರತ್ನ ಅವರನ್ನು ಮಂತ್ರಿ ಸ್ಥಾನದಿಂದ ಕೈಬಿಟ್ಟಿರುವ ಸುದ್ದಿಗೆ ಪೂರಕದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯುತ್ತಿದೆ.
ಮುನಿರತ್ನಗೆ ಮಂತ್ರಿ ಸ್ಥಾನ ಕೈ ತಪ್ಪಿರುವ ನಿಟ್ಟಿನಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ವಿಜಯೇಂದ್ರ ಮುನಿರತ್ನ ಮನವೊಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಒಟ್ಟು 7 ಶಾಸಕರಿಗೆ ಸಚಿವ ಸ್ಥಾನ: ಮೂಲಗಳ ಪ್ರಕಾರ ಏಳು ಶಾಸಕರಿಗೆ ಸಚಿವ ಸ್ಥಾನ ನಿಗದಿಯಾಗಿದ್ದು, ಓರ್ವ ಹಾಲಿ ಸಚಿವರನ್ನು ಮಂತ್ರಿ ಸ್ಥಾನದಿಂದ ತೆರವುಗೊಳಿಸಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ. ಎಂಟಿಬಿ ನಾಗರಾಜ್, ಆರ್.ಶಂಕರ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅಂಗಾರ, ಸಿ.ಪಿ.ಯೋಗೇಶ್ವರ್ ಹಾಗೂ ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ಸಿಕ್ಕಿರುವುದು ಬಹುತೇಕ ನಿಗದಿಯಾಗಿದೆ.
ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಸಚಿವ ಸ್ಥಾನ ಕೈ ತಪ್ಪಿದೆ ಎನ್ನಲಾಗಿದೆ. ಸದ್ಯ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಮನವೊಲಿಸುವ ಕೇಂದ್ರವಾಗಿ ಬದಲಾಗಿದೆ ಎನ್ನಲಾಗ್ತಿದೆ.
ಇದನ್ನೂ ಓದಿ: ಶಾಸಕ ಅಂಗಾರಗೆ ಒಲಿದ ಮಂತ್ರಿ ಭಾಗ್ಯ?