ಬೆಂಗಳೂರು:ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ರಾತ್ರಿ ನಿಷೇಧಾಜ್ಞೆ, ವಾರಾಂತ್ಯದ ನಿಷೇಧಾಜ್ಞೆಯಲ್ಲಿ ರಿಯಾಯಿತಿ ನೀಡುವ ಕುರಿತು ಶುಕ್ರವಾರ ನಿರ್ಧರಿಸುವ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್, ಒಂದು ಕಾಲು ಗಂಟೆ ಸಭೆ ನಡೆದಿದೆ. ಕರ್ನಾಟಕ ತೆಗೆದುಕೊಂಡಿರುವ ಕ್ರಮಗಳು, ಲಸಿಕೆ ಅಭಿಯಾನ, ವಿದ್ಯಾರ್ಥಿಗಳಿಗೆ ಲಸಿಕೆ ನೀಡಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಕೊರೊನಾ ತಪಾಸಣೆ ಮಾಡುವುದನ್ನು ಹೆಚ್ಚು ಮಾಡುತ್ತಿದ್ದೇವೆ, ಇಡೀ ದೇಶದಲ್ಲಿ ನಾವೇ ಹೆಚ್ಚು ತಪಾಸಣೆ ಮಾಡುತ್ತಿದ್ದೇವೆ, ಅಷ್ಟು ಪ್ರಮಾಣದಲ್ಲಿ ಪರೀಕ್ಷೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಮಿತಿಯವರು ಹೇಳಿದ್ದಾರೆ. ಹಾಗಾಗಿ ಇನ್ಮುಂದೆ ತಪಾಸಣೆ ಪ್ರಮಾಣ ಕಡಿಮೆ ಮಾಡಲಾಗುತ್ತದೆ ಎಂದರು.
ಕಾದು ನೋಡೋಣ ಎಂದ ಸಿಎಂ:
ಬೇರೆ ಬೇರೆ ರಾಜ್ಯಗಳನ್ನು ಉದಾಹರಣೆಗೆ ತೆಗೆದುಕೊಂಡಾಗ ಜನವರಿ 25ಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಪೀಕ್ಗೆ ಹೋಗಲಿದೆ, ನಂತರ ಕಡಿಮೆಯಾಗಲಿದೆ ಎಂದು ವರದಿ ಕೊಟ್ಟಿದ್ದಾರೆ. ಹಾಗಾಗಿ ರಾತ್ರಿ ನಿಷೇಧಾಜ್ಞೆ, ವಾರಾಂತ್ಯದ ನಿಷೇಧಾಜ್ಞೆಯಲ್ಲಿ ಬದಲಾವಣೆ ಮಾಡಬೇಕೋ ಬೇಡವೋ ಎನ್ನುವ ಕುರಿತು ನಾನು ಕೂಡ ಚರ್ಚೆ ಮಾಡಿದ್ದೇನೆ. ಸಭೆಯಲ್ಲಿ ಮುಖ್ಯಮಂತ್ರಿಗಳು ಕೂಡ ತಜ್ಞರು ನೀಡಿದ ವರದಿ, ಎಲ್ಲರ ಅಭಿಪ್ರಾಯ ಪಡೆದು ಶುಕ್ರವಾರದವರೆಗೂ ಕಾಯೋಣ, ಬೇರೆ ಬೇರೆ ರಾಜ್ಯದಲ್ಲಿ ಏನೆಲ್ಲಾ ಆಗಲಿದೆ ಎಂದು ಕಾದು ನೋಡೋಣ. ಜನವರಿ 25ರ ನಂತರ ಕೋವಿಡ್ ಇಳಿಮುಖವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಇದೆ. ಇದರಲ್ಲಿ ಬದಲಾವಣೆ ಮಾಡಬೇಕೋ ಮಾಡಬಾರದು ಎನ್ನುವ ಕುರಿತು ಶುಕ್ರವಾರದವರೆಗೂ ಕಾದು ನೋಡಿ ಟಫ್ ಗೈಡ್ಲೈನ್ಸ್ಗೆ ವಿನಾಯಿತಿ ನೀಡುವ ಕುರಿತು ನಿರ್ಧರಿಸೋಣ ಎಂದು ಸಿಎಂ ಹೇಳಿದ್ದಾರೆ. ಹಾಗಾಗಿ ಅಲ್ಲಿಯವರೆಗೂ ಈಗಿರುವ ನಿಯಮ ಮುಂದುವರೆಯಲಿದೆ ಎಂದು ಅಶೋಕ್ ತಿಳಿಸಿದರು.