ಬೆಂಗಳೂರು:ಲಾಕ್ ಡೌನ್ನಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳು ಆದಾಯವಿಲ್ಲದೇ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿ ಎದುರಾಗಿರುವ ಕಾರಣ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಯ ವೇತನವನ್ನು ಸರ್ಕಾರದಿಂದಲೇ ನೀಡಲು ನಿರ್ಧರಿಸಲಾಗಿದೆ.
ಪ್ರಥಮ ಹಂತದ ಲಾಕ್ ಡೌನ್ ವೇಳೆ ಸಾರಿಗೆ ಇಲಾಖೆಗೆ 1200 ಕೋಟಿ ನಷ್ಟ ಉಂಟಾಗಿದೆ. ಕೆಎಸ್ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಹಾಗೂ ವಾಯವ್ಯ ಸಾರಿಗೆ ನಿಗಮಗಳಿಗೆ ಆದಾಯವೇ ಇಲ್ಲದಂತಾಗಿದೆ. ಪ್ರಯಾಣಿಕರ ಟಿಕೆಟ್ ಹಣವೇ ಸಿಬ್ಬಂದಿ ವೇತನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಬಸ್ ಸಂಚಾರ ಇಲ್ಲದೇ ಆದಾಯವೇ ಇಲ್ಲವಾಗಿದೆ. ನಮ್ಮ ಜನರ ಹಾಗೂ ಸಿಬ್ಬಂದಿಗಳ ಪ್ರಾಣಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನಕ್ಕೆ ಸಮಸ್ಯೆಯಾಗದಂತೆ ಸರ್ಕಾರದಿಂದಲೇ ವೇತನ ಪಾವತಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಯ ನೀಡಿದ್ದು, ವೇತನ ಕಡಿತದಂತಹ ಭೀತಿಯಲ್ಲಿದ್ದ ಸಾರಿಗೆ ನಿಗಮದ ಸಿಬ್ಬಂದಿಗೆ ನೆಮ್ಮದಿ ಮೂಡಿಸಿದೆ.