ಕರ್ನಾಟಕ

karnataka

ETV Bharat / state

ಬಿಜೆಪಿ ಪ್ರಮುಖರ ಸಭೆಗೆ ಬಿಎಸ್​ವೈಗಿಲ್ಲ ಆಹ್ವಾನ : ಪ್ರಾಥಮಿಕ ಸಭೆಯಾಗಿದ್ದಕ್ಕೆ ಕರೆದಿಲ್ಲ ಎಂದು ಸಿಎಂ ಸಷ್ಪನೆ - ಶಿವಮೊಗ್ಗ ಪ್ರವಾಸದಲ್ಲಿದ್ದ ಮಾಜಿ ಸಿಎಂ ಯಡಿಯೂರಪ್ಪ

ಯಡಿಯೂರಪ್ಪ ಹಾಗೂ ಅವರ ಕುಟುಂಬದವರನ್ನು ಸಂಪೂರ್ಣವಾಗಿ ಬದಿಗೆ ತಳ್ಳಿ ಹೊಸದಾಗಿ ಬಿಜೆಪಿ ಪಕ್ಷ ಕಟ್ಟುವ ವ್ಯವಸ್ಥೆ ನಡೆಯುತ್ತಿದೆ ಎನ್ನುವ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್​ ಮಾತು ನಿಜವಾಗುತ್ತಿದೆಯಾ...?

Former Chief Minister BS Yeddyurappa
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

By

Published : Jan 20, 2023, 6:00 PM IST

Updated : Jan 20, 2023, 7:49 PM IST

ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಅವರನ್ನು ಹೊರಗಿಟ್ಟು ಬಿಜೆಪಿ ಪ್ರಮುಖರ ಸಭೆ ನಡೆಸಲಾಗಿದ್ದು, ರಾಜ್ಯ ಬಿಜೆಪಿ ನಾಯಕರು ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿದ್ದಾರಾ ಎನ್ನುವ ಅನುಮಾನ ಹುಟ್ಟುಹಾಕಿದೆ. ಪಕ್ಷದ ಅಧಿಕೃತ ಸಭೆಗೆ ಪಕ್ಷ ಕಟ್ಟಿದ ಹಿರಿಯ ನಾಯಕರನ್ನೇ ಆಹ್ವಾನಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಪಕ್ಷದ ಪ್ರಮುಖರ ಸಭೆ ನಡೆಯಿತು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.

ಪಕ್ಷದ ಚುನಾವಣಾ ಕಾರ್ಯತಂತ್ರದ ಭಾಗವಾಗಿ ನಡೆದ ಸಭೆಯಿಂದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದೂರ ಉಳಿದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಎರಡು ದಿನಗಳ ಹಿಂದೆಯೇ ಈ ಸಭೆ ನಿಗದಿಯಾಗಿದೆ. ಮುಖ್ಯಮಂತ್ರಿಗಳ ಅಧಿಕೃತ ಕಾರ್ಯಕ್ರಮಗಳ ಪಟ್ಟಿಗೂ ಬಿಜೆಪಿ ಸಭೆ ಸೇರಿಸಲಾಗಿತ್ತು. ಎರಡು ದಿನಗಳ ಕೆಳಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾಗ ಎಲ್ಲ ನಾಯಕರೂ ಒಟ್ಟಿಗೆ ಇದ್ದರು. ಆಗಲೇ ಈ ಸಭೆ ನಿರ್ಧಾರವಾಗಿತ್ತಾದರೂ ಯಡಿಯೂರಪ್ಪ ಅವರಿಗೆ ಯಾಕೆ ಆಹ್ವಾನ ನೀಡಲಿಲ್ಲ ಎನ್ನುವುದು ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಸಭೆಗೆ ಇರಲಿಲ್ಲವಂತೆ ಆಹ್ವಾನ:ಶಿವಮೊಗ್ಗ ಪ್ರವಾಸದಲ್ಲಿದ್ದ ಮಾಜಿ ಸಿಎಂ ಯಡಿಯೂರಪ್ಪ, ಇಂದು ಬೆಳಗ್ಗೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ತಲುಪಿದ್ದರು. ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ್ದರು. ಪಕ್ಷದ ಸಭೆ 2.30 ಕ್ಕೆ ಇದ್ದರೂ 3 ಗಂಟೆಗೆ ಶುರುವಾಯಿತು. ಆಹ್ವಾನ ಇದ್ದಿದ್ದರೆ ಯಡಿಯೂರಪ್ಪ ಈ ಸಭೆಯಲ್ಲಿ ಭಾಗಿಯಾಗುತ್ತಿದ್ದರು. ಆದರೆ ಆಹ್ವಾನ ಇಲ್ಲದ ಕಾರಣದಿಂದಲೇ ಈ ಸಭೆಯಿಂದ ದೂರ ಉಳಿದಿದ್ದಾರೆ. ಯಡಿಯೂರಪ್ಪ ಅವರಿಗೆ ಇಂದಿನ ಸಭೆಗೆ ಆಹ್ವಾನ ಇರಲಿಲ್ಲ ಎನ್ನುವ ಮಾಹಿತಿಯನ್ನು ಬಿಎಸ್​ವೈ ಕಚೇರಿ ಮೂಲಗಳು ಖಚಿತಪಡಿಸಿವೆ.

ಇನ್ನು ಯಾವ ಕಾರಣದಿಂದ ಯಡಿಯೂರಪ್ಪ ಅವರನ್ನು ಹೊರಗಿಟ್ಟು ಸಭೆ ನಡೆಸಲಾಯಿತು ಎನ್ನುವ ಪ್ರಶ್ನೆಗೆ ಬಿಜೆಪಿ ನಾಯಕರಿಂದ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ನಮಗೆ ಈ ಬಗ್ಗೆ ಮಾಹಿತಿ ಇಲ್ಲ ಎನ್ನುವ ಉತ್ತರವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರು ನೀಡಿದ್ದಾರೆ. ಯಡಿಯೂರಪ್ಪ ಅವರನ್ನು ಬಿಟ್ಟು ಚುನಾವಣಾ ಪ್ರಚಾರದ ವಿಷಯ, ಕಾರ್ಯತಂತ್ರದಂತಹ ವಿಷಯಗಳ ಕುರಿತು ಸಭೆ ನಡೆಸಿರುವುದು ಯಡಿಯೂರಪ್ಪ ಅವರನ್ನು ರಾಜ್ಯ ಘಟಕ ಕಡೆಗಣಿಸಲು ಆರಂಭಿಸಿದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

ಇತ್ತೀಚೆಗೆ ಚಾಮರಾಜನಗರ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮದ ಬದಲಾಗಿ ಸರ್ಕಾರಿ ಕಾರ್ಯಕ್ರಮವಾಗಿ ಪರಿವರ್ತನೆ ಮಾಡಲಾಗಿತ್ತು. ಯಡಿಯೂರಪ್ಪ ಅವರನ್ನು ದೂರ ಇರಿಸುವ ಕಾರಣದಿಂದಲೇ ಹೀಗೆ ಮಾಡಲಾಗಿತ್ತು ಎನ್ನುವ ಮಾತುಗಳು ಕೇಳಿ ಬಂದಿದ್ದವು. ನಂತರ ತುಮಕೂರಿನ ಜನಸ್ಪಂದನ ಸಮಾವೇಶದಿಂದಲೂ ಯಡಿಯೂರಪ್ಪ ದೂರ ಉಳಿದು ಅಸಮಾಧಾನ ಹೊರಹಾಕಿದ್ದರು. ಇದರ ನಡುವೆ ಇದೀಗ ಪಕ್ಷದ ಪ್ರಮುಖ ಸಭೆಯಿಂದ ಯಡಿಯೂರಪ್ಪ ಅವರನ್ನು ಹೊರಗಿಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಭೆಯಿಂದ ಬಿಎಸ್​​​ವೈ ದೂರ ಉಳಿದ್ದೇಕೆ?:ಒಂದು ಕಡೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಪಕ್ಷದ ಕೇಂದ್ರ ಮಟ್ಟದಲ್ಲಿ ಅವಕಾಶ ನೀಡಲಾಗಿದೆ. ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗಳಲ್ಲಿ ಸದಸ್ಯ ಸ್ಥಾನ ನೀಡಿ ಹೈಕಮಾಂಡ್ ಯಡಿಯೂರಪ್ಪಗೆ ಆದ್ಯತೆ ನೀಡುತ್ತಿದ್ದರೆ, ಇತ್ತ ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ. ಇದರ ಹಿಂದೆ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದ ಸಂಘಟನಾ ಜವಾಬ್ದಾರಿ ಹೊತ್ತ ರಾಜ್ಯದ ನಾಯಕರಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಪ್ರತಿಕ್ರಿಯೆ: ಯಡಿಯೂರಪ್ಪ ಅವರಿಗೆ ಇಂದಿನ ಆಹ್ವಾನ ನೀಡದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಹಳ ಒಳ್ಳೆಯ ಪ್ರಶ್ನೆ, ಇದು ಪ್ರಾಥಮಿಕ ಸಭೆ, ಅದು ವರ್ಕೌಟ್ ಆದ ಬಳಿಕ ಎಲ್ಲ ಚರ್ಚೆ ನಡೆಸಿ ಹಿರಿಯರನ್ನು ಕರೆದು ಅಂತಿಮ ತೀರ್ಮಾನ ಮಾಡುತ್ತೇವೆ. ಹೀಗಾಗಿ ಇಂದಿನ ಸಭೆಗೆ ಆಹ್ವಾನ ಕೊಟ್ಟಿರಲಿಲ್ಲ. ನಿರ್ಣಯಗಳನ್ನು ಅಂತಿಮಗೊಳಿಸುವಾಗಿ ಯಡಿಯೂರಪ್ಪ ಅವರನ್ನೂ ಸಂಪರ್ಕಿಸುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ: ಚುನಾವಣಾ ಪ್ರಚಾರದ ರೋಡ್ ಮ್ಯಾಪ್ ಕುರಿತು ಚರ್ಚೆ..!

Last Updated : Jan 20, 2023, 7:49 PM IST

ABOUT THE AUTHOR

...view details