ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹಾಲಿನ ದರ ಹೆಚ್ಚಳವಿಲ್ಲ. ಈ ಕುರಿತ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿನಿ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಅವರು ಹಾಲು ದರ ಏರಿಕೆ ಕುರಿತಂತೆ ಸ್ಪಷ್ಟನೆ ನೀಡಿದರು.
ನಂದಿನಿ ಉತ್ಪನ್ನಗಳ ನೂತನ ರಾಯಭಾರಿ ನಟ ಶಿವ ರಾಜ್‌ಕುಮಾರ್ ಅವರ ಜಾಹೀರಾತನ್ನು ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಗೀತಾ ಶಿವ ರಾಜ್‌ಕುಮಾರ್, ಸಚಿವ ಮಧು ಬಂಗಾರಪ್ಪ, ಭೀಮಾ ನಾಯ್ಕ್ ಮೊದಲಾದವರು ಭಾಗವಹಿಸಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಾನಾಯ್ಕ್, ಹಿಂದಿನಿಂದಲೂ ರಾಜ್‌ಕುಮಾರ್ ಕುಟುಂಬದವರನ್ನೇ ನಂದಿನಿ ರಾಯಭಾರಿಯನ್ನಾಗಿ ಮಾಡಲಾಗುತ್ತಿದೆ. ಪುನಿತ್ ರಾಜ್‌ಕುಮಾರ್ ಅವರು ನಂದಿನಿ ರಾಯಭಾರಿ ಆಗಿದ್ದರು. ಈಗ ಡಾ.ಶಿವ ರಾಜ್‌ಕುಮಾರ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದೇವೆ. ನಮ್ಮ ಮನವಿಗೆ ಅವರು ಮನವಿಗೆ ಸ್ಪಂದಿಸಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ಶಿವ ರಾಜ್‌ಕುಮಾರ್ ಅವರನ್ನು ಸನ್ಮಾನಿಸಿದರು ಎಂದರು.
ನಂದಿನಿ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳು ಬಿಡುಗಡೆ ಕಾರ್ಯಕ್ರಮ
ಎಮ್ಮೆಯ ಮೊಸರು ಬಿಡುಗಡೆ: ಇಂದು ನಾವು ನಂದಿನಿ ಬ್ರ್ಯಾಂಡ್‌ನ ಮೂರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದೇವೆ. ಎಮ್ಮೆಯ ಮೊಸರನ್ನು ಮಾರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು. ಹಾಲಿನ ದರ ಹೆಚ್ಚಳದ ಪ್ರಸ್ತಾಪವಿಲ್ಲ. ಆಗಸ್ಟ್ 1ರಂದು 3ರೂ ಹೆಚ್ಚಳ ಮಾಡಿದ್ದೇವೆ. ಅದನ್ನು ನೇರವಾಗಿ ರೈತರಿಗೆ ಕೊಟ್ಟಿದ್ದೇವೆ. ಎಂದು ಹೇಳಿದರು.
ನಟ ಶಿವ ರಾಜ್‌ಕುಮಾರ್ ಮಾತನಾಡಿ, ನಂದಿನಿ ಉತ್ಪನ್ನಗಳು ಚೆನ್ನಾಗಿವೆ. ಹೊಸ ಉತ್ಪನ್ನ ಬಿಡುಗಡೆಯ ಟೀಸರ್ ಕೂಡಾ ಬಿಡುಗಡೆಯಾಗಿದೆ ಎಂದರು. ಇನ್ನು, ಕೆಸಿಸಿಯಲ್ಲಿ ಪಾಲ್ಗೊಳ್ಳಲು ಸಿಎಂಗೆ ಆಹ್ವಾನ ನೀಡಿದ್ದೇನೆ. ಕ್ರಿಸ್ಮಸ್ ದಿನ ಬರುವುದಕ್ಕೆ ಆಹ್ವಾನ ನೀಡಿದ್ದೇನೆ ಎಂದು ಅವರು ತಿಳಿಸಿದರು.
ನಂದಿನಿ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳು ಬಿಡುಗಡೆ ಕಾರ್ಯಕ್ರಮ
ವಿಷ್ಣು ಸ್ಮಾರಕ ನಿರ್ಮಾಣ ವಿಚಾರ:ದಿವಂಗತ ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರವಾಗಿ ಅವರ ಕುಟುಂಬದವರು ನಿರ್ಧರಿಸಲಿ ಎಂದು ಶಿವ ರಾಜ್‌ಕುಮಾರ್ ಅಭಿಪ್ರಾಯಪಟ್ಟರು. ವಿಷ್ಣು ಸರ್ ಮೇಲೆ ಪ್ರೀತಿ ಎಲ್ಲರಿಗೂ ಇದೆ. ಭಾರತಿ ಅಮ್ಮ ಇದ್ದಾರೆ, ವಿಷ್ಣುವರ್ಧನ್ ಅಳಿಯ ಇದ್ದಾರೆ. 1974ರಿಂದ ವಿಷ್ಣು ಸರ್ ಕೈ ಹಿಡಿದುಕೊಂಡು ಓಡಾದಿದ್ದೇನೆ. ಅಭಿಮಾನಿಗಳು ಚಿಂತೆ ಮಾಡೋದು ಬೇಡ. ಅವರ ಸ್ಮಾರಕ ಆಗಬೇಕು ಅಂದರೆ ಆಗಿಯೇ ಆಗುತ್ತದೆ ಎಂದರು.
ಇದನ್ನೂ ಓದಿ:ಗೃಹಲಕ್ಷ್ಮಿ ಯೋಜನೆ ಸಮಸ್ಯೆ ಬಗೆಹರಿಸಲು ಗ್ರಾಪಂ ಮಟ್ಟದಲ್ಲಿ ಕ್ಯಾಂಪ್ ಆಯೋಜಿಸಲು ಸರ್ಕಾರದ ಸೂಚನೆ