ಕರ್ನಾಟಕ

karnataka

ETV Bharat / state

ಅನುದಾನ ಇಲ್ಲದೆ ಸೊರಗಿದ ನಾಡು, ನುಡಿ ಅಭಿವೃದ್ಧಿಗೆ ರಚಿತವಾದ ಪ್ರಾಧಿಕಾರಗಳು

ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪ್ರಾಧಿಕಾರ 9 ವರ್ಷಗಳಿಂದ ಕಾರ್ಯಾರಂಭ ಮಾಡದೇ ಬರೀ ಘೋಷಣೆಗೆ ಸೀಮಿತವಾಗಿವೆ. ಪ್ರಾಧಿಕಾರಕ್ಕೆ ಬಜೆಟ್​​ನಲ್ಲಿ ಅಲ್ಪಸ್ವಲ್ಪ ಅನುದಾನ ಹಂಚಿಕೆಯಾಗಿದೆ. ಆದರೆ, ಇದುವರೆಗೆ ಖರ್ಚಾಗಿದ್ದು ಮಾತ್ರ ಶೂನ್ಯ. ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಈ ಪ್ರಾಧಿಕಾರಕ್ಕೆ 2019-20ರಲ್ಲಿ 20 ಲಕ್ಷ ಅನುದಾನ ಹಂಚಲಾಗಿದ್ದರೆ, 2020-21ರಲ್ಲಿ 25 ಲಕ್ಷ ಅನುದಾನ ಹಂಚಲಾಗಿತ್ತು. ಆದರೆ, ಈ ಅನುದಾನ ಖರ್ಚಾಗದೇ ಹಾಗೆ ಉಳಿದುಕೊಂಡಿದೆ..

No grants from the government for the development of Authorities
ಅನುದಾನ ಇಲ್ಲದೆ ಸೊರಗಿದ ನಾಡು ನುಡಿ ಅಭಿವೃದ್ಧಿಗೆ ರಚಿತವಾದ ಪ್ರಾಧಿಕಾರಗಳು

By

Published : Apr 1, 2022, 3:08 PM IST

ಬೆಂಗಳೂರು :ನಾಡು, ನುಡಿಗಾಗಿ ಅಭಿವೃದ್ಧಿ ಕಾರ್ಯ ಮಾಡುತ್ತೇವೆ ಎನ್ನುವ ಸರ್ಕಾರಗಳ ಭರವಸೆ ವಾಸ್ತವದಲ್ಲಿ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ನಾಡು, ನುಡಿಯ ಏಳಿಗೆಗಾಗಿ ಸರ್ಕಾರ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸುತ್ತದೆ.‌ ಆದರೆ, ಈ ಪ್ರಾಧಿಕಾರಗಳಿಗೆ ಹಣ ಖರ್ಚು ಮಾಡುವುದನ್ನು ಮಾತ್ರ ಸರ್ಕಾರ ಮರೆತೇ ಬಿಟ್ಟಂತಿದೆ.

ರಾಜ್ಯ ಸರ್ಕಾರ ಬನವಾಸಿ ಅಭಿವೃದ್ಧಿ ಪ್ರಾಧಿಕಾರ, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ, ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಗಳನ್ನು ರಚನೆ ಮಾಡಿದೆ. ಈ ಪ್ರಾಧಿಕಾರಗಳ ಮೂಲಕ ನಾಡು ನುಡಿಯ ಅಭಿವೃದ್ಧಿ‌ ಮಾಡಬೇಕು. ಆದ್ರೆ, ಬಜೆಟ್​ನಲ್ಲಿ ಈ ಪ್ರಾಧಿಕಾರಗಳಿಗೆ ನೀಡುವ ಅನುದಾನ ಅಷ್ಟಕ್ಕಷ್ಟೇ ಆಗಿದ್ದು, ಮತ್ತೊಂದೆಡೆ ಲಭ್ಯ ಅಲ್ಪ ಅನುದಾನವೂ ವಿನಿಯೋಗ ಆಗುವುದಿಲ್ಲ. ಕಂದಾಯ ಇಲಾಖೆಯ ನಿರ್ವಹಣಾ ವರದಿ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳ ಸೊರಗಿದ ಸ್ಥಿತಿಗತಿಗೆ ಹಿಡಿದ ಕೈಗನ್ನಡಿಯಾಗಿದೆ.

ಅನುದಾನ, ಅಭಿವೃದ್ಧಿ ಇಲ್ಲದ ಸರ್ವಜ್ಞ ಪ್ರಾಧಿಕಾರ: ತ್ರಿಪದಿ ಕವಿ, ಜನರ ಕವಿ ಎಂದೇ ಪ್ರಸಿದ್ಧಿ ಪಡೆದ ಸರ್ವಜ್ಞನ ಹೆಸರಲ್ಲಿ ಪ್ರಾಧಿಕಾರ ರಚನೆಯಾಗಿ ಒಂಬತ್ತು ವರ್ಷ ಕಳೆದಿದೆ. ಆದರೆ, ಅದಿನ್ನೂ ಸರ್ಕಾರದ ಕಡತದಲ್ಲೇ ಉಳಿದುಕೊಂಡಿದ್ದು, ಕಾರ್ಯರೂಪಕ್ಕೆ ಬಂದಿಲ್ಲ. ಸರ್ವಜ್ಞನ ವಿಚಾರಧಾರೆ, ಆದರ್ಶಗಳನ್ನು ಜನತೆಗೆ ತಿಳಿಸಲು ಹಾಗೂ ಅವರ ಹುಟ್ಟೂರಾದ ಅಬಲೂರ, ಮಾಸೂರನ್ನು ಪ್ರವಾಸೋದ್ಯಮ ಸ್ಥಳಗಳನ್ನಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2012ರಂದು ಸರ್ವಜ್ಞ ಪ್ರಾಧಿಕಾರ ರಚಿಸಿ ಆದೇಶ ಹೊರಡಿಸಿದ್ದರು.

ಆದರೆ, ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪ್ರಾಧಿಕಾರ 9 ವರ್ಷಗಳಿಂದ ಕಾರ್ಯಾರಂಭ ಮಾಡದೇ ಬರೀ ಘೋಷಣೆಗೆ ಸೀಮಿತವಾಗಿವೆ. ಪ್ರಾಧಿಕಾರಕ್ಕೆ ಬಜೆಟ್​​ನಲ್ಲಿ ಅಲ್ಪಸ್ವಲ್ಪ ಅನುದಾನ ಹಂಚಿಕೆಯಾಗಿದೆ. ಆದರೆ, ಇದುವರೆಗೆ ಖರ್ಚಾಗಿದ್ದು ಮಾತ್ರ ಶೂನ್ಯ. ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಈ ಪ್ರಾಧಿಕಾರಕ್ಕೆ 2019-20ರಲ್ಲಿ 20 ಲಕ್ಷ ಅನುದಾನ ಹಂಚಲಾಗಿದ್ದರೆ, 2020-21ರಲ್ಲಿ 25 ಲಕ್ಷ ಅನುದಾನ ಹಂಚಲಾಗಿತ್ತು. ಆದರೆ, ಈ ಅನುದಾನ ಖರ್ಚಾಗದೇ ಹಾಗೆ ಉಳಿದುಕೊಂಡಿದೆ.

ಸೊರಗಿದ ಕೂಡಲಸಂಗಮ ಅಭಿವೃದ್ಧಿ ಮಂಡಳಿ :ಬಾಗಲಕೋಟೆ ಜಿಲ್ಲೆಯಲ್ಲಿನ ಕೂಡಲಸಂಗಮ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯನ್ನು 1994ರಲ್ಲಿ ರಚಿಸಲಾಗಿತ್ತು. ಸಂಗಮೇಶ್ವರ ದೇವಸ್ಥಾನ ಮತ್ತು ಬಸವೇಶ್ವರರ ಐಕ್ಯಮಂಟಪಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವುದು ಹಾಗೂ ಕೂಡಲಸಂಗಮವನ್ನು ಅಂತಾರಾಷ್ಟ್ರೀಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಕಂದಾಯ ಇಲಾಖೆ ನೀಡಿದ ಅಂಕಿ-ಅಂಶದ ಪ್ರಕಾರ, 1999ರಲ್ಲಿ 30.58 ಕೋಟಿ ರೂ.‌ಬಿಡುಗಡೆಯಾಗಿದೆ. ಇದನ್ನು ವಿವಿಧ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಆದರೆ, 2021-22 ಸಾಲಿನಲ್ಲಿ 2 ಕೋಟಿ ರೂ.‌ಅನುದಾನ ಹಂಚಿಕೆ ಮಾಡಲಾಗಿದೆ. ಇದುವರೆಗೆ ಅನುದಾನ ಮಾತ್ರ ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ:ರಾಜ್ಯ ಸರ್ಕಾರದ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು ಘೋಷಣೆ

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಶೂನ್ಯ ಅನುದಾನ :ವೀರ ನಾರಿ ಕಿತ್ತೂರು ರಾಣಿ ಚೆನ್ನಮ್ಮರ ಸಮಾಧಿ ಸ್ಥಳದ ಅಭಿವೃದ್ಧಿ ಸೇರಿ ರಾಣಿ ಚೆನ್ನಮ್ಮನವರ ಸಾಹಸ ಆಡಳಿತ, ಶೌರ್ಯ ಒಟ್ಟಾರೆ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನು 2011ರಲ್ಲಿ ರಚಿಸಲಾಯಿತು. ಈವರೆಗೆ ಪ್ರಾಧಿಕಾರಕ್ಕೆ 10 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ ಈವರೆಗೆ ಖರ್ಚು ಮಾಡಿರುವುದು ಬರೀ 35.95 ಲಕ್ಷ ರೂ.‌ ಮಾತ್ರ. 2021-22ರಲ್ಲಿ ಪ್ರಾಧಿಕಾರಕ್ಕೆ ಯಾವುದೇ ಅನುದಾನ ಹಂಚಿಕೆಯಾಗಿಲ್ಲ, ಜೊತೆಗೆ ಯಾವುದೇ ಖರ್ಚು ಮಾಡಿಲ್ಲ. ಪ್ರಾಧಿಕಾರದ ಘೋಷಣೆ ಕೇವಲ ಘೋಷಣೆಯಾಗಿ ಉಳಿದಿದೆ.

ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಅರ್ಧಚಂದ್ರ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಆದಿ ಕವಿ ಪಂಪನ ಜನ್ಮಸ್ಥಳಕ್ಕೆ ಕಾಯಕಲ್ಪ ಹಾಗೂ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಗಾಗಿ 2016ರಲ್ಲಿ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಯಿತು. ಆದರೆ, ಅಭಿವೃದ್ಧಿ ‌ಮಾತ್ರ ಶೂನ್ಯವಾಗಿದೆ. ರಚನೆಯಾಗಿ ಐದು ವರ್ಷಗಳಲ್ಲಿ ಪ್ರಾಧಿಕಾರಕ್ಕೆ ಕೇವಲ 5 ಕೋಟಿ ಮಾತ್ರ ಅನುದಾನ ದೊರೆತಿದೆ.

ಈವರೆಗೆ 20 ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿದರೂ, ಅನುಷ್ಠಾನ ಮಾತ್ರ ಕಾಣುತ್ತಿಲ್ಲ. 2021-22 ಸಾಲಿನಲ್ಲಿ 50 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿತ್ತು. ಈ ಪೈಕಿ 25 ಲಕ್ಷ ರೂ. ಮಾತ್ರ ಖರ್ಚು ಮಾಡಲಾಗಿದೆ.

ABOUT THE AUTHOR

...view details