ಕರ್ನಾಟಕ

karnataka

ETV Bharat / state

ಅತೃಪ್ತರ ಅರ್ಜಿ ಇತ್ಯರ್ಥವಾಗುವವರೆಗೂ ಹೊಸ ಸರ್ಕಾರ ರಚನೆ ಇಲ್ಲ!?

ಮೈತ್ರಿ ಸರ್ಕಾರ ಅಂತ್ಯವಾಗುತ್ತಿದ್ದಂತೆ, ಬಿಜೆಪಿ ಸರ್ಕಾರ ರಚಿಸುವ ಯೋಚನೆ ಹೊಂದಿತ್ತು. ಆದರೀಗ ಅತೃಪ್ತ ಶಾಸಕರಿಂದ ಮುಂದೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ, ಅತೃಪ್ತರ ರಾಜೀನಾಮೆ ಅಂಗೀಕಾರ ಆಗುವವರೆಗೂ ಹೊಸ ಸರ್ಕಾರ ರಚನೆ ಮಾಡುವುದಿಲ್ಲ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದೆ.

ಬಿಎಸ್​ವೈ

By

Published : Jul 25, 2019, 11:56 AM IST

ಬೆಂಗಳೂರು:ಮೈತ್ರಿ ಸರ್ಕಾರದ ಪತನದ ಬಳಿಕ ಗುರುವಾರವೇ ಬಿಜೆಪಿ ಸರ್ಕಾರ ರಚಿಸುತ್ತದೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬಹುದು ಎಂದು ಉಮೇದಿನಲ್ಲಿದ್ದ ಯಡಿಯೂರಪ್ಪ ಅವರ ವೇಗಕ್ಕೆ ಬ್ರೇಕ್ ಬಿದ್ದಿದೆ. ಇದಕ್ಕೆ ಕಾರಣ ಸುಪ್ರೀಂಕೋರ್ಟ್ ಹಾಗೂ ಸಭಾಧ್ಯಕ್ಷರ ಮುಂದಿರುವ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಅರ್ಜಿ ಇತ್ಯರ್ಥ ಆಗುವವರೆಗೂ ಪ್ರಮಾಣವಚನ ಸ್ವೀಕರಿಸದಿರಲು ಬಿಎಸ್​​ವೈ ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರವೂ ಇದೇ ನಿಲುವು ತಾಳಿದ್ದು ಇಂದು ಬೆಳಗ್ಗೆ ರಾಜ್ಯ ಬಿಜೆಪಿ ನಿಯೋಗದೊಂದಿಗೆ ಸಂಸದೀಯ ಮಂಡಳಿಯೂ ಇದೇ ವಿಷಯ ಚರ್ಚಿಸುವ ಸಾಧ್ಯತೆ ದಟ್ಟವಾಗಿದೆ.

ಆತುರದಿಂದ ಸರ್ಕಾರ ರಚನೆಗೆ ಮುಂದಾದಲ್ಲಿ ಅತೃಪ್ತ ಶಾಸಕರ ವಿಚಾರದಲ್ಲಿ ಯಡವಟ್ಟಾದರೆ ಮತ್ತೆ ಬಿಜೆಪಿಗೆ ವಿಶ್ವಾಸ ಮತ ಯಾಚನೆ ವೇಳೆ ಸಂಖ್ಯಾಬಲ ಕೊರತೆಯಾದರೆ ಮುಖಭಂಗ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ, ಅತೃಪ್ತರ ವಿಚಾರ ಇತ್ಯರ್ಥವಾದ ಬಳಿಕವಷ್ಟೇ ಪ್ರಮಾಣವಚನಕ್ಕೆ ಮುಂದಾಗುತ್ತಾರೆ ಎನ್ನಲಾಗುತ್ತಿದೆ. ಎಲ್ಲ ಅತೃಪ್ತ ಶಾಸಕರ ಮೇಲೂ ಅಮಿತ್ ಷಾಗೆ ನಂಬಿಕೆ ಇಲ್ಲ. ಸಿದ್ದರಾಮಯ್ಯ ಅವರ ಆಪ್ತರೂ ಕೆಲವರು ಇರುವುದರಿಂದ ಸರ್ಕಾರ ರಚನೆ ಸಂದರ್ಭದಲ್ಲಿ ಇವರಿಂದ ತೊಂದರೆಯಾಗಬಹುದು ಎಂಬ ಅನುಮಾನ ಅಮಿತ್ ಷಾ ಅವರಿಗೆ ಕಾಡುತ್ತಿದೆ . ಹಾಗಾಗಿಯೇ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಎರಡರಲ್ಲಿ ಒಂದು ಕ್ರಮವಾದರೂ ಸಾಕು ಎಂದು ಕಾಯುತ್ತಿದೆ ಬಿಜೆಪಿ.

ಈಗಿರುವ ಪರಿಸ್ಥಿತಿಯಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಆಗದ ಹೊರತು ನಮ್ಮ ಬಳಿ ಬಹುಮತ ಇದೆ ಎಂದು ರಾಜ್ಯಪಾಲರ ಮುಂದೆ ಯಡಿಯೂರಪ್ಪ ಅವರು ಹಕ್ಕುಮಂಡನೆ ಕಷ್ಟಸಾಧ್ಯ. ಸ್ಪೀಕರ್ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಬಿಜೆಪಿಯ ಚಿತ್ತ ನೆಟ್ಟಿದೆ. ಇವತ್ತೂ ಕೂಡಾ ಬಿಜೆಪಿ ನಿಯೋಗ ಸ್ಪೀಕರ್ ಅವರನ್ನು ಭೇಟಿ ಮಾಡಿ ಒತ್ತಡ ಹೇರುವ ಸಾಧ್ಯತೆ ಇದೆ.

ನಿವಾಸದಲ್ಲೇ ಉಳಿದುಕೊಂಡಿರುವ ಬಿಎಸ್ ವೈ :ಮುಂಜಾನೆ ತಮ್ಮ ನಿವಾಸಕ್ಕೆ ಆಗಮಿಸಿದ ಕೆ ಆರ್ ಪೇಟೆಯ ತೋಗರ್ಸಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಜೊತೆ ಬಿಎಸ್ ಯಡಿಯೂರಪ್ಪ ಮಾತನಾಡಿದರು. ಬಳಿಕ ವಿಕ್ರಂ ಆಸ್ಪತ್ರೆಗೆ ತೆರಳಿ ಸಂಬಂಧಿಕರ ಆರೋಗ್ಯ ವಿಚಾರಿಸಿ ಮತ್ತೆ ನಿವಾಸಕ್ಕೆ ವಾಪಸ್​​ ಆದರು. ಕೆಲವು ಹಿತೈಷಿಗಳು ನಿವಾಸಕ್ಕೆ ಆಗಮಿಸಿ ಯಡಿಯೂರಪ್ಪ ಅವರಿಗೆ ಶುಭಕೋರುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details