ಬೆಂಗಳೂರು:ರಾಜಕೀಯ ಪಕ್ಷಗಳು ಏನೇ ಪ್ರತಿಭಟನೆ ನಡೆಸಬಹುದು. ಆದರೆ ಹೊರಗಿನ ವಿದ್ಯಮಾನಗಳು ತನಿಖೆಯ ಮೇಲೆ ಪರಿಣಾಮ ಬೀರದು. ನಮ್ಮ ಪೊಲೀಸರು ಕ್ರಮಬದ್ಧವಾದ ರೀತಿಯಲ್ಲಿಯೇ ತನಿಖೆ ಮಾಡಿ ಸತ್ಯ ಕಂಡು ಹಿಡಿಯಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್ಟಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿಯ ಪೋಷಕರು ವಿಶೇಷ ತನಿಖಾ ತಂಡದೆದುರು ಹಾಜರಾಗಿ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ, ರಮೇಶ್ ಜಾರಕಿಹೊಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ದೂರು ನೀಡುವುದಾಗಿ ತಿಳಿಸಿದ್ದಾರೆ. ಗೃಹ ಸಚಿವನಾಗಿ ನಾನು ಬೇರೆಯವರ ರೀತಿ ಎಲ್ಲದಕ್ಕೂ ಹೇಳಿಕೆ ನೀಡಲು ಸಾಧ್ಯವಿಲ್ಲ. ಎಸ್ಐಟಿ ಕೆಲಸ ಮಾಡುತ್ತಿದೆ. ವಿಡಿಯೋ, ಆಡಿಯೋ, ಸಿಡಿ ಎಲ್ಲವನ್ನೂ ಪರಿಶೀಲನೆ ಮಾಡಲಿದೆ. ಅದಕ್ಕೊಂದು ಪದ್ಧತಿ, ವ್ಯವಸ್ಥೆ ಇದೆ. ಖಂಡಿತವಾಗಿಯೂ ಸತ್ಯಾಸತ್ಯತೆಯನ್ನು ಎಸ್ಐಟಿ ಪರಿಶೀಲನೆ ನಡೆಸಲಿದೆ ಎಂದರು.
ಯುವತಿಗೆ ಈಗಾಗಲೇ ನಾವು ರಕ್ಷಣೆ ನೀಡುವ ಭರವಸೆ ನೀಡಿದ್ದೇವೆ. ಈಗಾಗಲೇ 5 ಬಾರಿ ನೋಟಿಸ್ ಕೊಟ್ಟಿದ್ದೇವೆ. ಎಲ್ಲದರಲ್ಲಿಯೂ ಯುವತಿಗೆ ಸುರಕ್ಷತೆ ಕೊಡುವ ಬಗ್ಗೆ ಭರವಸೆ ನೀಡಿದ್ದೇನೆ. ನೀವು ಇರುವ ಕಡೆ ಬಂದು ವಿವರಣೆ ಪಡೆಯುವುದಾಗಿ ಹೇಳಿದ್ದೇವೆ. ಅವರ ತಂದೆ-ತಾಯಿಗೂ ಸುರಕ್ಷತೆ ಕೊಟ್ಟಿದ್ದೇವೆ. ಇವತ್ತಿಗೂ ಯುವತಿಗೆ ಭದ್ರತೆ ಕೊಡಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಜಾರಕಿಹೊಳಿ ನಿವಾಸದ ಎದುರು ಪ್ರತಿಭಟನೆ ಸಂಬಂಧ ಸ್ಥಳೀಯ ಪೊಲೀಸರು ಕ್ರಮ ಜರುಗಿಸಲಿದ್ದಾರೆ. ತನಿಖೆಯ ಹೊರಗೆ ನಡೆಯುವ ವಿದ್ಯಮಾನಗಳು ಎಸ್ಐಟಿ ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರಲ್ಲ ಎಂದರು.