ಬೆಂಗಳೂರು : ರಾಜ್ಯದ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ರೈತ ಸಮುದಾಯಕ್ಕೆ ಯಾವುದೇ ಅನುಕೂಲ ಆಗಿಲ್ಲ. ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರ ಅವರ ಬೆನ್ನು ಮುರಿದಿದೆ ಎಂದು ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ವಿಧಾನಸಭೆಯಲ್ಲಿ ಟೀಕಿಸಿದ್ದಾರೆ. ಇಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಇದು ಡಬಲ್ ಎಂಜಿನ್ ಸರ್ಕಾರವಲ್ಲ. ನಿಂತಲ್ಲೇ ನಿಂತಿರುವ ಡೀಸೆಲ್ ಇಲ್ಲದ ಸರ್ಕಾರವಾಗಿದೆ ಎಂದು ಕುಟುಕಿದರು.
ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ, ಯಾವುದೇ ಪ್ರಯತ್ನ ಮಾಡಿಲ್ಲ. ರೈತರ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 24 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ಸಹಕಾರಿ ಸಚಿವರು ನಿತ್ಯ ರೈತರಿಗೆ ಸಾಲಸೌಲಭ್ಯ ಕಲ್ಪಿಸಿರುವ ಬಗ್ಗೆ ಹೇಳುತ್ತಲೇ ಇದ್ದಾರೆ. ವಾಸ್ತವಿಕವಾಗಿ ನಿಜವಾದ ರೈತರಿಗೆ ಈ ಸೌಲಭ್ಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾತಿನ ಚಕಮಕಿ : ಇದೇ ವೇಳೆ, ರೈತರಿಗೆ ಸಾಲ ನೀಡುವ ವಿಚಾರದಲ್ಲಿ ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ಹಾಗೂ ಕಾಶೆಂಪೂರ್ ನಡುವೆ ಕೆಲ ಮಾತಿನ ಚಕಮಕಿ ನಡೆಯಿತು. ಮತ್ತೆ ಮಾತು ಮುಂದುವರೆಸಿದ ಕಾಶೆಂಪೂರ್, ರಾಜ್ಯಪಾಲರ ಭಾಷಣ ಕುರಿತು ಮಾತನಾಡಿದ ಆಡಳಿತ ಪಕ್ಷದ ಶಾಸಕ ಸಿ. ಟಿ ರವಿ ಅವರು, ಅಧಿಕಾರದ ಮದದಿಂದ ಸಮ್ಮಿಶ್ರ ಸರ್ಕಾರದ ರಚನೆ ಕುರಿತು ವ್ಯಂಗ್ಯವಾಡಿದ್ದಾರೆ. ಮಾತಿನ ಭರಾಟೆಯಲ್ಲಿ ವಿಕಲಾಂಗ ಮಗುವಿಗೆ ಹೋಲಿಕೆ ಮಾಡಿದ್ದಾರೆ.
ಆದರೆ, ನಾವ್ಯಾರು ಇನ್ನೊಬ್ಬರ ಮನೆ ಬಾಗಿಲಿಗೆ ಅಧಿಕಾರಕ್ಕಾಗಿ ಹೋಗಿಲ್ಲ. ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಇಂತಹ ಕೆಲಸ ಮಾಡಿಲ್ಲ. ಬಿಜೆಪಿ ರಾಜ್ಯದಲ್ಲಿ ಹೇಗೆ ಬೆಳೆಯಿತು? ಎಷ್ಟು ಬಾರಿ ಆಪರೇಷನ್ ಮಾಡಿತ್ತು ಎಂಬ ವಿಚಾರಗಳು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಚುನಾವಣೆ ಪ್ರಣಾಳಿಕೆಯಲ್ಲಿನ ಯಾವುದೇ ಭರವಸೆ ಈಡೇರಿಸಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಹೇಳಿರುವಂತೆ ಅಭಿವೃದ್ಧಿಯಾಗಿಲ್ಲ ಎಂದು ಟೀಕಿಸಿದರು.
ಆಟೋರಿಕ್ಷಾ ಚಾಲಕರ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ನಿಗಮ ಅಥವಾ ಮಂಡಳಿ ರಚನೆಗೆ ಆಗ್ರಹ : ರಾಜ್ಯದಲ್ಲಿನ ಆಟೋರಿಕ್ಷಾ ಚಾಲಕರ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ನಿಗಮ ಅಥವಾ ಮಂಡಳಿ ರಚಿಸಬೇಕು ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿ ಇಂದು ಆಗ್ರಹಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರಿದ್ದು, ಬಡ ಮಧ್ಯಮ ವರ್ಗದ ಜನರು, ಆಟೋರಿಕ್ಷಾವನ್ನು ಅವಲಂಬಿಸಿದ್ದಾರೆ. ಆದರೆ, ಆಟೋರಿಕ್ಷಾ ಚಾಲಕರಿಗೆ ಇಎಸ್‍ಐ, ಪಿಎಫ್, ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯವಿಲ್ಲ. ರಿಕ್ಷಾ ಚಾಲಕರು ಎಲ್ಲಾ ಜಾತಿ ವರ್ಗದವರು ಇದ್ದಾರೆ. ಹೀಗಾಗಿ ಅವರಿಗೆ ಪ್ರತ್ಯೇಕ ನಿಗಮ ರಚಿಸಿ ಅವರ ಕಲ್ಯಾಣಕ್ಕೆ ನೆರವಾಗಬೇಕು. ಮುಂದಿನ ಆಯ-ವ್ಯಯದಲ್ಲಿ ಈ ವಿಚಾರ ಘೋಷಣೆ ಆಗಬೇಕು ಎಂದು ಒತ್ತಾಯಿಸಿದರು.