ಬೆಂಗಳೂರು: ಇಂದು ರಾಜ್ಯದಲ್ಲಿ ಯಾವುದೇ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 15 ಜನರಿಗೆ ಮಾತ್ರ ಪಾಸಿಟಿವ್ ರಿಸಲ್ಟ್ ಬಂದಿದೆ. ಆ ಸಂಖ್ಯೆಯಲ್ಲಿ ಯಾವುದೇ ಏರಿಕೆ ಆಗಿಲ್ಲ. ಇವತ್ತಿನವರೆಗೆ 1,23,778 ವಿದೇಶಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಂಗಳೂರು, ಕಾರವಾರ ಬಂದರಿನಲ್ಲಿ ನಿಗಾ ಇಡಲಾಗಿದೆ. ಒಟ್ಟು ನಿಗಾ ಇಟ್ಟವರ ಸಂಖ್ಯೆ 4,300. ಇವತ್ತು 981 ಜನರ ಮೇಲೆ ನಿಗಾ ಇರಿಸಲಾಗಿದೆ. 756 ಜನರ 28 ದಿನಗಳ ಪತ್ಯೇಕ ನಿಗಾ ಅವಧಿ ಮುಗಿಯಲಿದೆ. ಇವತ್ತು 88 ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಒಟ್ಟು 1,207 ಜನರನ್ನು ಪರೀಕ್ಷೆ ಮಾಡಲಾಗಿದ್ದು, 970 ಜನರಿಗೆ ನೆಗೆಟಿವ್ ರಿಸಲ್ಟ್ ಬಂದಿದೆ. ಇಂದು 57 ಜನರಿಗೆ ನೆಗೆಟಿವ್ ರಿಸಲ್ಟ್ ಬಂದಿದೆ ಎಂದು ಮಾಹಿತಿ ನೀಡಿದರು.
ಸಚಿವ ಡಾ. ಕೆ.ಸುಧಾಕರ್ ಸುದ್ದಿಗೋಷ್ಠಿ ಪಾಸಿಟಿವ್ ಬಂದವರಲ್ಲಿ ಐವರು ಗುಣಮುಖ:ಪಾಸಿಟಿವ್ ರಿಸಲ್ಟ್ ಬಂದವರಲ್ಲಿ 5 ಜನರು ಗುಣಮುಖರಾಗಿದ್ದಾರೆ. ಒಬ್ಬರನ್ನು ಸೋಮವಾರದ ತನಕ ಆಸ್ಪತ್ರೆಯಲ್ಲಿರಿಸಿ ಡಿಸ್ಚಾರ್ಜ್ ಮಾಡುತ್ತೇವೆ. ಭಾನುವಾರ ಇಬ್ಬರನ್ನು ಡಿಸ್ಚಾರ್ಜ್ ಮಾಡುತ್ತೇವೆ. ಒಟ್ಟು ಐದು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಈ ಪೈಕಿ ಇಬ್ಬರನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿ ಮೇರೆಗೆ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಶಿಕ್ಷಕರಿಗೆ ರಜೆ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಶಿಕ್ಷಣ ಸಚಿವರ ಜೊತೆ ಮಾತಾಡಬೇಕಿತ್ತು. ಆದರೆ ಪ್ರಧಾನಿ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ಇದ್ದ ಹಿನ್ನೆಲೆ ಸಾಧ್ಯವಾಗಿಲ್ಲ. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. ಇನ್ನು ಅಂತರ್ ರಾಜ್ಯ ಬಸ್ ಸೇವೆಯನ್ನು ಸ್ಥಗಿತಗೊಳಿಸಿಲ್ಲ. ಆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.
ಸ್ಥಳದಲ್ಲೇ ಸ್ಕ್ರೀನಿಂಗ್ ಮಾಡಲು ಚಿಂತನೆ: ಗಾರ್ಮೆಂಟ್ಸ್ಗಳಲ್ಲಿ ಹೆಚ್ಚು ಜನ ಕೆಲಸ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಅವರನ್ನು ಕೆಲಸ ಮಾಡುವ ಸ್ಥಳಗಳಲ್ಲೇ ಸ್ಕ್ರೀನಿಂಗ್ ಮಾಡುವುದಕ್ಕೆ ವ್ಯವಸ್ಥೆ ಮಾಡುವ ಚಿಂತನೆ ಇದೆ ಎಂದರು.