ಕರ್ನಾಟಕ

karnataka

ETV Bharat / state

ಪರಿಷತ್​ನಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ: ಸೂಕ್ತ ಸಮಯಕ್ಕೆ ಚರ್ಚೆಗೆ ಅವಕಾಶ ನೀಡುವ ಭರವಸೆ - legislative council speaker

ಭೋಜನ ವಿರಾಮದ ನಂತರ ಕಲಾಪ ಸೇರುತ್ತಿದ್ದಂತೆ ಪ್ರತಾಪ್ ಚಂದ್ರ ಶೆಟ್ಟಿ ಪದಚ್ಯುತಿ ವಿಚಾರವನ್ನು ಸಭಾಪತಿ ಸ್ಥಾನದಲ್ಲಿದ್ದ ಪ್ರತಾಪ್ ಚಂದ್ರ ಶೆಟ್ಟಿ ಅವರೇ ಪ್ರಸ್ತಾಪಿಸಿದರು. ಸದಸ್ಯ ಆಯನೂರು ಮಂಜುನಾಥ್ ಅವರಿಗೆ ನಿರ್ಣಯ ಮಂಡಿಸುವಂತೆ ಆಹ್ವಾನಿಸಿದರು.

Bangalore
ವಿಧಾನ ಪರಿಷತ್ತಿನಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ..

By

Published : Feb 2, 2021, 4:02 PM IST

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಪದಚ್ಯುತಿ ಸಂಬಂಧ ಇಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವಿಶ್ವಾಸ ನಿರ್ಣಯ ಮಂಡಿಸಿದರು.

ಭೋಜನ ವಿರಾಮದ ನಂತರ ಕಲಾಪ ಸೇರುತ್ತಿದ್ದಂತೆ ಪ್ರತಾಪ್ ಚಂದ್ರ ಶೆಟ್ಟಿ ಪದಚ್ಯುತಿ ವಿಚಾರವನ್ನು ಸಭಾಪತಿ ಸ್ಥಾನದಲ್ಲಿದ್ದ ಪ್ರತಾಪ್ ಚಂದ್ರ ಶೆಟ್ಟಿ ಅವರೇ ಪ್ರಸ್ತಾಪಿಸಿದರು. ಸದಸ್ಯ ಆಯನೂರು ಮಂಜುನಾಥ್ ಅವರಿಗೆ ನಿರ್ಣಯ ಮಂಡಿಸುವಂತೆ ಆಹ್ವಾನಿಸಿದರು. ಬಿಜೆಪಿಯ ಸದಸ್ಯ ಆಯನೂರು ಮಂಜುನಾಥ್ ನಿರ್ಣಯ ಮಂಡಿಸುತ್ತಿದ್ದಂತೆಯೇ ಇದರ ಪರವಾಗಿ ಇರುವ 10 ಸದಸ್ಯರು ಎದ್ದು ನಿಂತರೆ ನಿರ್ಣಯ ಚರ್ಚೆಗೆ ಅಂಗೀಕಾರವಾಗಲಿದೆ ಎಂದು ಸಭಾಪತಿಗಳು ತಿಳಿಸಿದರು.

ಸದನದಲ್ಲಿದ್ದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಎದ್ದು ನಿಂತು ನಿರ್ಣಯವನ್ನು ಬೆಂಬಲಿಸಿದ ಹಿನ್ನೆಲೆ ಸಭಾಪತಿಗಳು ಈ ನಿರ್ಣಯ ಚರ್ಚೆಗೆ ಅಂಗೀಕಾರವಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದರು. ಚರ್ಚೆಗೆ ಸೂಕ್ತ ಸಮಯ ನಿಗದಿಪಡಿಸಿ ತಿಳಿಸುವುದಾಗಿ ಸಭಾಪತಿಗಳು ಭರವಸೆ ಇತ್ತರು.

ಕಳೆದ ಜ. 18ರಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಡಾ. ತಳವಾರ ಸಾಬಣ್ಣ, ಅರುಣ್ ಶಹಾಪುರ, ಎಸ್.ವಿ.ಸಂಕನೂರು, ಮಹಾಂತೇಶ್ ಕವಟಗಿಮಟ, ನಿರಾಣಿ ಹನುಮಂತ ರುದ್ರಪ್ಪ ಹಾಗೂ ಪರಿಷತ್ ಬಿಜೆಪಿ ಸದಸ್ಯರು ನಿಯಮ 165 ಹಾಗೂ ಭಾರತ ಸಂವಿಧಾನದ 183ನೇ ಅನುಚ್ಛೇದದ ಅಡಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಬೇಕು ಎಂದು ನಿರ್ಣಯದಲ್ಲಿ ತಿಳಿಸಿದ್ದರು.

ಇಂದು ಈ ನಿರ್ಣಯ ಮಂಡನೆಯಾಗಿದ್ದು, ಸಭಾಪತಿಗಳು ಸೂಕ್ತ ಸಮಯದಲ್ಲಿ ಚರ್ಚೆಗೆ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪರಿಷತ್​ನಲ್ಲಿ ನಿರ್ಣಯ ಮಂಡನೆಯಾದ ಹಿನ್ನೆಲೆ ಮುಂದಿನ ಐದು ದಿನಗಳ ಒಳಗೆ ಯಾವುದೇ ದಿನ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಬಹುದಾಗಿದೆ. ಈಗ ನಡೆಯುತ್ತಿರುವ ಅಧಿವೇಶನ ಫೆ. 5ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಬಹುದು. ಇಲ್ಲವೇ ಮುಂದಿನ ಅಧಿವೇಶನದವರೆಗೂ ಮುಂದೂಡಿಕೊಳ್ಳುವ ಅವಕಾಶ ಸಭಾಪತಿಗಳಿಗೆ ಇದೆ.

ಒಂದೊಮ್ಮೆ ಈ ಅವಧಿಯ ಮುನ್ನವೇ ಸಭಾಪತಿಗಳು ರಾಜೀನಾಮೆ ಕೂಡ ಸಲ್ಲಿಸಬಹುದಾಗಿದೆ. ರಾಜೀನಾಮೆ ಸಲ್ಲಿಸುವ ಮೂಲಕ ತಮಗಾಗುವ ಅವಮಾನವನ್ನು ಕೂಡ ಅವರು ತಪ್ಪಿಸಿಕೊಳ್ಳಬಹುದಾಗಿದೆ. ಇಲ್ಲವೇ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿ ಈ ಪ್ರಕ್ರಿಯೆಗೆ ಸಮಯಾವಕಾಶ ನೀಡುವ ಸಾಧ್ಯತೆಯೂ ಇದೆ.

ABOUT THE AUTHOR

...view details