ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಂಡ್ಯ ಮತ್ತು ಬೆಂಗಳೂರು ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ. ನಿಗದಿತ ಕಾರ್ಯಕ್ರಮಗಳು ಅಮಿತ್ ಶಾ ಉಪಸ್ಥಿತಿಯಲ್ಲಿಯೇ ನಡೆಯಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್‌ಟಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಅಮಿತ್ ಶಾ ಬಂದಿದ್ದಾರೆ. ಅವರ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಮೋದಿ ಅವರ ತಾಯಿ ಅಂತ್ಯಸಂಸ್ಕಾರ ಕಾರ್ಯ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಸಲು ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ ಅಮಿತ್ ಶಾ ಗುಜರಾತ್ ಪ್ರವಾಸ ಕೈ ಬಿಟ್ಟಿದ್ದು, ರಾಜ್ಯದಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಪೂರ್ವನಿಗದಿಯಂತೆ ಅಮಿತ್ ಶಾ ಅವರ ಮಂಡ್ಯ ಹಾಗೂ ಬೆಂಗಳೂರು ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
ಮೀಸಲಾತಿ ಬಗ್ಗೆ ಇಂದು ವಿಸ್ತೃತ ವರದಿ: ನಿನ್ನೆ ಸಂಜೆ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಬಗ್ಗೆ ತೀರ್ಮಾನ ಮಾಡಿದ್ದೇವೆ. ನಿನ್ನೆ ಹೆಚ್ಚುವರಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಇದರ ಬಗ್ಗೆ ನಾನು ಹೆಚ್ಚಿನ ಮಾಹಿತಿ ನೀಡಿರಲಿಲ್ಲ. ಇಂದು ಮಧ್ಯಾಹ್ನ ಈ ಬಗ್ಗೆ ಸಂಪೂರ್ಣವಾದ ವಿವರಗಳನ್ನು ನೀಡಲಿದ್ದೇನೆ. ಅಮಿತ್ ಶಾ ಕಾರ್ಯಕ್ರಮದ ನಂತರ ಎಲ್ಲಾ ಜಿಲ್ಲೆಗಳ ಜೊತೆಗೂ ಆ ನಿರ್ಣಯಗಳನ್ನ ಹಂಚಿಕೊಳ್ಳಲಿದ್ದೇನೆ. ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಉದ್ದೇಶವೇನು?, ಅದನ್ನ ಯಾವ ರೀತಿ ಅನುಷ್ಠಾನ ಮಾಡುತ್ತಿದ್ದೇವೆ ಎನ್ನುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಸಂಬಂಧ ಪಟ್ಟ ಎಲ್ಲರೊಂದಿಗೂ ಮಾಹಿತಿ ಹಂಚಿಕೊಂಡು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.
ಗೋವಾ ಸಿಎಂ ಅವರಿಂದ ಜಾಸ್ತಿ ನಿರೀಕ್ಷೆ ಮಾಡಲ್ಲ: ಕಳಸಾ ಬಂಡೂರಿ ವಿಷಯದಲ್ಲಿ ಗೋವಾ ಸಿಎಂ ಅವರ ಕಡೆಯಿಂದ ಜಾಸ್ತಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಈ ದೇಶ ಕಾನೂನಿನಿಂದ ನಡೆಯಲಿದೆ. ದೇಶದಲ್ಲಿ ಅಂತರ ರಾಜ್ಯ ಜಲ ವ್ಯಾಜ್ಯ ಕಾಯ್ದೆ, ಸುಪ್ರೀಂಕೋರ್ಟ್ ಇದೆ. ನ್ಯಾಯಾಧಿಕರಣದ ಆದೇಶ ಆಗಿದೆ, ಕೇಂದ್ರ ಸರ್ಕಾರ ನೋಟಿಫಿಕೇಶನ್ ಕೂಡ ಮಾಡಿದೆ. ಈಗ ನಮ್ಮ ಡಿಪಿಆರ್ ಗೆ ಒಪ್ಪಿಗೆ ಕೊಟ್ಟಿದ್ದಾರೆ. ಎಲ್ಲವೂ ಕಾನೂನು ಬದ್ಧವಾಗಿ ಆಗಿದೆ, ಕರ್ನಾಟಕ ಏನೇ ಮಾಡಿದರೂ ಕಾನೂನು ಬದ್ಧವಾಗಿಯೇ ಮಾಡಲಿದೆ. ಈಗ ನಮಗೆ ಡಿಪಿಆರ್ ಒಪ್ಪಿಗೆ ನೀಡಿ ಮುಂದಿನ ಕೆಲಸಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಮುಂದಿನ ಎಲ್ಲ ಕ್ರಮಗಳನ್ನು ಕಾನೂನು ಬದ್ಧವಾಗಿಯೇ ತೆಗೆದುಕೊಳ್ಳುತ್ತೇವೆ ಎಂದರು.