ಬೆಂಗಳೂರು:ಅಣ್ಣಾಮಲೈ ಸಂಚರಿಸಿದ ಹೆಲಿಕಾಪ್ಟರ್ ನಗದು ಹಣ ಸಾಗಣೆ ಆರೋಪ ಸಂಬಂಧ ಸ್ಪಷ್ಟೀಕರಣ ನೀಡಿರುವ ಮುಖ್ಯ ಚುನಾವಣಾಧಿಕಾರಿ, ಯಾವುದೇ ಹಣ ಸಾಗಾಟವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನ ವಿನಯ್ ಕುಮಾರ್ ಸೊರಕೆ ಆರೋಪ:ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಉಡುಪಿಗೆ ಬರಲು ತಾವು ಬಳಸಿದ ಹೆಲಿಕಾಪ್ಟರ್ನಲ್ಲಿ ನಗದು ಹಣ ತೆಗೆದುಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆ ಆರೋಪಿಸಿದ್ದರು. ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಬಿಜೆಪಿ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ, ಅವರು ಹೆಲಿಕಾಪ್ಟರ್ ಮೂಲಕ ಗಂಟು ತಂದಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.
ಈ ಸಂಬಂಧ ಉಡುಪಿ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ನೀತಿ ಸಂಹಿತೆಯ ಪ್ರಕಾರ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಉಡುಪಿ ಜಿಲ್ಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ಪ್ರತಿ ಹಂತದಲ್ಲಿ ಸೂಕ್ತ ತಪಾಸಣೆ ನಡೆಸಲಾಗಿದೆ ಎಂದು ವರದಿ ನೀಡಿದ್ದಾರೆ ಎಂದು ತಿಳಿಸಿದೆ.
ಸಂಚಾರಿ ಪರಿವೀಕ್ಷಣಾ ತಂಡದಿಂದ ಪರಿಶೀಲನೆ:ಹೆಲಿಕಾಪ್ಟರ್ ಮೂಲಕ ಏ.17ರ ಬೆಳಿಗ್ಗೆ 9.55ಕ್ಕೆ ಉಡುಪಿಗೆ ಆಗಮಿಸಿದ್ದನ್ನು ಸಂಚಾರಿ ಪರಿವೀಕ್ಷಣಾ ತಂಡ ( ಫ್ಲೈಯಿಂಗ್ ಸ್ಕ್ವಾಡ್ ತಂಡ) ತಪಾಸಣೆ ಹಾಗೂ ಪರಿಶೀಲನೆ ನಡೆಸಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿಲ್ಲ ಎಂದು ವರದಿ ಮಾಡಲಾಗಿದೆ. ಹೆಲಿಪ್ಯಾಡ್ನಿಂದ ಉಡುಪಿಯ ಓಷನ್ ಪರ್ಲ್ ಹೋಟೆಲ್ಗೆ ಬಂದ ವಾಹನವನ್ನು ಫ್ಲೈಯಿಂಗ್ ಸ್ಕ್ವಾಡ್ ತಂಡ ಹಾಗೂ ಜಿಎಸ್ ಟಿ ತಂಡ ಜಂಟಿಯಾಗಿ ತಪಾಸಣೆ ಮತ್ತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಒಂದು ಬ್ಯಾಗ್ ನಲ್ಲಿ ಎರಡು ಜೊತೆ ಬಟ್ಟೆ ಹಾಗೂ ಕುಡಿಯುವ ನೀರಿನ ಬಾಟಲ್ ದೊರೆತಿದ್ದು, ನೀತಿ ಸಂಹಿತೆಯ ಉಲ್ಲಂಘನೆ ಆಗಿಲ್ಲ ಎಂದು ತಂಡಗಳು ವರದಿ ಮಾಡಿದೆ ಎಂದಿದ್ದಾರೆ.