ಬೆಂಗಳೂರು : ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಸವದತ್ತಿ ಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸದಿರಲು ಕೇಂದ್ರ ಚುನಾವಣೆ ಆಯೋಗ ನಿರ್ಧರಿಸಿದಂತಿದೆ. ಬರುವ ವರ್ಷದ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ '' ಸಾರ್ವತ್ರಿಕ ಚುನಾವಣೆ'' ನಡೆಯಲಿರುವುದರಿಂದ ಕೇಂದ್ರ ಚುನಾವಣೆ ಆಯೋಗ ಈ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಸಚಿವರಾಗಿದ್ದ ಉಮೇಶ ಕತ್ತಿ ಮತ್ತು ವಿಧಾನಸಭೆ ಉಪಾಧ್ಯಕ್ಷರಾಗಿದ್ದ ಆನಂದ ಚಂದ್ರಶೇಖರ ಮಾಮನಿ ಅವರ ಅಗಲಿಕೆಯಿಂದ ತೆರವಾಗಿರುವ ಹುಕ್ಕೇರಿ ಮತ್ತು ಸವದತ್ತಿ ಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಕೇಂದ್ರ ಚುನಾವಣೆ ಆಯೋಗ ವಾಡಿಕೆಯಂತೆ ಉಪ ಚುನಾವಣೆ ನಡೆಸಬೇಕಿತ್ತು. ಉಪಚುನಾವಣೆ ನಡೆದ ಕೆಲವೇ ತಿಂಗಳಲ್ಲಿ ಈ ಎರಡೂ ಕ್ಷೇತ್ರಕ್ಕೆ ಮತ್ತೆ ಸಾರ್ವತ್ರಿಕ ಚುನಾವಣೆ ನಡೆಸಬೇಕಾಗಿರುವುದರಿಂದ ಉಪ ಚುನಾವಣೆಯ ನಡೆಸುವ ಬಗ್ಗೆ ಕೇಂದ್ರ ಚುನಾವಣೆ ಆಯೋಗ ಹೆಚ್ಚು ಆಸಕ್ತಿ ವಹಿಸಿಲ್ಲ ಎನ್ನಲಾಗಿದೆ.
ವಿಧಾನಸಭೆ ಚುನಾವಣೆಗೆ ಕೇವಲ 7 ತಿಂಗಳು ಬಾಕಿ :ಸಾಮಾನ್ಯವಾಗಿ ಹಾಲಿ ಶಾಸಕರ ರಾಜೀನಾಮೆಯಿಂದ ತೆರವಾದ ಅಥವಾ ಶಾಸಕರ ನಿಧನದಿಂದ ಖಾಲಿಯಾಗುವ ವಿಧಾನಸಭೆ ಕ್ಷೇತ್ರಕ್ಕೆ ಆರು ತಿಂಗಳೊಳಗೆ ಚುನಾವಣೆ ನಡೆಸುವುದು ಕೇಂದ್ರ ಚುನಾವಣೆ ಆಯೋಗದ ನಿಯಮದ ಪ್ರಕಾರ ಕಡ್ಡಾಯವಾಗಿದೆ. ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ 7 ತಿಂಗಳು ಬಾಕಿಯಿರುವಾಗ ಉಪ ಚುನಾವಣೆ ನಡೆಸುವುದು ಎಷ್ಟು ಸಮಂಜಸ ಎನ್ನುವ ಕಾರಣಕ್ಕೆ ಕೇಂದ್ರ ಚುನಾವಣೆ ಆಯೋಗವು ಹುಕ್ಕೇರಿ ಮತ್ತು ಸವದತ್ತಿ ಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡದಿರುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.
ಹುಕ್ಕೇರಿ ಹಾಗೂ ಸವದತ್ತಿಗೆ ಉಪ ಚುನಾವಣೆ ಘೋಷಣೆ ಮಾಡಿಲ್ಲ: ಈ ಕಾರಣಕ್ಕಾಗಿಯೇ ಕೇಂದ್ರ ಚುನಾವಣೆ ಆಯೋಗವು ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸುವಾಗ ರಾಜ್ಯದ ಹುಕ್ಕೇರಿ ಹಾಗೂ ಸವದತ್ತಿ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡಲಿಲ್ಲ.