ಬೆಂಗಳೂರು: ಕೊರೊನಾ ರೋಗಿಗಳ ಚಿಕಿತ್ಸೆ ವಿಚಾರದಲ್ಲಿ ಬೆಂಗಳೂರಿನ ಸ್ಥಿತಿ ಭಯಾನಕವಾಗುತ್ತಿದೆ. ನಗರದಲ್ಲಿ ಕೋವಿಡ್ - 19 ಪಾಸಿಟಿವ್ ಬಂದು ತೀವ್ರ ಜ್ವರದಿಂದ ಬಳಲುತ್ತಿದ್ರೂ, ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಎಂದು ಚಿಕಿತ್ಸೆ ನೀಡದೆ ನಿರಾಕರಿಸಲಾಗುತ್ತಿದೆ.
ವಾರ್ಡ್ 137 ರಾಯಪುರಂನ ಜೆ.ಜೆ.ಆರ್ ನಗರ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ, ಇಬ್ಬರು ವ್ಯಕ್ತಿಗಳಿಗೆ ನಿನ್ನೆಯೇ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಅದರಲ್ಲಿ ಒಬ್ಬರು ಫೀವರ್ ಕ್ಲಿನಿಕ್ನಲ್ಲಿ 'ಆಯಾ' ಕೆಲಸ ಮಾಡುತ್ತಿದ್ದ 50 ವರ್ಷದ ಮಹಿಳೆಯಾಗಿದ್ದಾರೆ.
ಅವರಿಗೆ ಜ್ವರ ಬಂದ ಹಿನ್ನೆಲೆ ಕೊರೊನಾ ಟೆಸ್ಟ್ ಮಾಡಿದ್ದಾರೆ. ಆದರೆ ಪಾಸಿಟಿವ್ ಬಂದು 24 ಗಂಟೆಗಳಾದ್ರೂ, ಆರೋಗ್ಯ ಅಧಿಕಾರಿಗಳು ಇವರ ನೆರವಿಗೆ ಬಂದಿಲ್ಲ. ವಿಕ್ಟೋರಿಯಾ, ಬೌರಿಂಗ್, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಬೆಡ್ಯಿಲ್ಲ ಎಂದು ಸಬೂಬು ಹೇಳಿದ್ದಾರೆ.
ಸೋಂಕಿತ ಕೊರೊನಾ ವಾರಿಯರ್ಗೂ ಬೆಡ್ ವ್ಯವಸ್ಥೆ ಇಲ್ಲ ಬಡವರಾಗಿದ್ದರಿಂದ ಸಣ್ಣ ಸಣ್ಣ ವಠಾರದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇತರರಿಗೂ ಹರಡುವ ಸಾಧ್ಯತೆ ಇದೆ ಎಂದು ಸ್ಥಳೀಯ ಕಾರ್ಪೊರೇಟರ್ ಅಣ್ಣ ಕೇಶವ್ 'ಈಟಿವಿ ಭಾರತ'ಕ್ಕೆ ತಿಳಿಸಿದರು.
ಇನ್ನೊಂದೆಡೆ ಇದೇ ಬೀದಿಯ ಹಿಂಬಾಗದಲ್ಲಿ 70 ವರ್ಷದ ವ್ಯಕ್ತಿಗೂ ಕೊರೊನಾ ಬಂದಿದೆ. ಆದ್ರೆ ಆಸ್ಪತ್ರೆಗೆ ದಾಖಲಿಸಿಲ್ಲ. ಜಂಟಿ ಆಯುಕ್ತರಾದ ಚಿದಾನಂದ ಅವರ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲ. ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಕಾರ್ಪೊರೇಟರ್ ಆತಂಕ ವ್ಯಕ್ತಪಡಿಸಿದರು.