ಬೆಂಗಳೂರು: ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಅಶ್ವಿನಿ ಗೌಡ ತಳ್ಳಿಹಾಕಿದ್ದಾರೆ.
ಮಿಂಟೋ ಆಸ್ಪತ್ರೆಯಿಂದ ಬೆಂಗಳೂರು ಮೆಡಿಕಲ್ ಕಾಲೇಜುವರೆಗೆ ಕಿರಿಯ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ, ಕ್ಷಮೆ ಕೇಳುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಪಟ್ಟು ಹಿಡಿದಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ, ಕಿರಿಯ ವೈದ್ಯರ ಮೇಲೆ ನಾವು ಹಲ್ಲೆ ಮಾಡಿಲ್ಲ. ಕಣ್ಣು ಕಳೆದುಕೊಂಡವರಿಗೆ ನ್ಯಾಯ ಕೇಳಲು ಹೋದಾಗ ಕನ್ನಡ ಭಾಷೆ ಬಗ್ಗೆ ವೈದ್ಯೆ ತುಂಬಾ ಹಗುರವಾಗಿ ಮಾತನಾಡಿದ್ದಾರೆ. ಕನ್ನಡ ಭಾಷೆ ಗೊತ್ತಿದ್ದರೂ ಯಾಕೆ ಉಡಾಫೆ ಅಂತ ಪ್ರಶ್ನಿಸಿದಾಗ, ನನ್ನಿಷ್ಟ ಎಂದು ಉತ್ತರ ನೀಡಿದ್ದಾರೆ. ಇದಕ್ಕೆ ಕನ್ನಡ ಮಾತಾಡಿ ಅಂತ ವಿನಂತಿ ಮಾಡಿಕೊಂಡಿದ್ದೇವೆ ವಿನಾ ಹಲ್ಲೆ ಮಾಡಿಲ್ಲ ಅಂತ ಅಶ್ವಿನಿ ಗೌಡ ಸ್ಪಷ್ಟಪಡಿಸಿದ್ದಾರೆ.
ಭಾಷೆ, ನೆಲ ಜಲದ ವಿಚಾರ ಬಂದಾಗ ಕರವೇ ಟೊಂಕ ಕಟ್ಟಿ ನಿಂತು ಅದರ ಉಳಿವಿಗೆ ನಿಲ್ಲುತ್ತದೆ. ಹಲ್ಲೆಯೇ ಮಾಡದಿದ್ದಾಗ ಕ್ಷಮೆ ಕೇಳುವ ಪ್ರಶ್ನೆಯೇ ಬರುವುದಿಲ್ಲ. ಕ್ಷಮೆ ಯಾವುದೇ ಕಾರಣಕ್ಕೂ ಕೇಳುವುದಿಲ್ಲ. ನಮ್ಮ ಹೋರಾಟ ಮುಂದುವರೆಸಲಿದ್ದೇವೆ ಅಂತ ತಿಳಿಸಿದರು.