ಬೆಂಗಳೂರು: ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಗೋ ಸಂಕುಲವನ್ನು ಸಂರಕ್ಷಿಸಲು ಮಹತ್ವಾಕಾಂಕ್ಷಿ ಪುಣ್ಯಕೋಟಿ ದತ್ತು ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಗೋ ಶಾಲೆಗಳಲ್ಲಿನ ಹಸುಗಳನ್ನು ದತ್ತು ಪಡೆಯುವ ಈ ಯೋಜನೆಗೆ ನಿರೀಕ್ಷಿತ ಆರಂಭಿಕ ಜನಸ್ಪಂದನೆ ಸಿಕ್ಕಿಲ್ಲ.
ಪುಣ್ಯಕೋಟಿ ದತ್ತು ಯೋಜನೆಯು ಬೊಮ್ಮಾಯಿ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆ. ಇದೇ ವರ್ಷ ಜುಲೈ 28ಕ್ಕೆ ರಾಜ್ಯ ಸರ್ಕಾರ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ ನೀಡಲಾಗಿತ್ತು. ಸ್ಥಳೀಯ ದೇಶಿ ತಳಿಗಳ ಸಂರಕ್ಷಣೆ ಮತ್ತು ರಕ್ಷಣೆ, ಗೋಶಾಲೆಗಳ ಆರ್ಥಿಕ ಸಬಲೀಕರಣ ಹಾಗೂ ಹಸುಗಳ ಆರೈಕೆಯಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ದತ್ತು ಪಡೆದ ಹಸುವಿನ ಜೊತೆ ಉಂಟಾಗುವ ಭಾವನಾತ್ಮಕ ಬಂಧದಿಂದ ದಾನಿಗಳ ಮನಸ್ಸಿನ ಕ್ಷೇಮ ಸುಧಾರಣೆಯ ಉದ್ದೇಶದೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸಿಎಂ ಬೊಮ್ಮಾಯಿ 11 ಹಸುಗಳನ್ನು ದತ್ತು ಪಡೆದು ಯೋಜನೆಗೆ ಚಾಲನೆ ನೀಡಿದ್ದರು. ವಾರ್ಷಿಕ 11 ಸಾವಿರ ಮೊತ್ತಕ್ಕೆ ಗೋವುಗಳನ್ನು ಗೋ ಶಾಲೆಗಳಿಂದ ದತ್ತು ಪಡೆಯುವ ಯೋಜನೆ ಇದಾಗಿದೆ.
ರಾಜ್ಯದಲ್ಲಿ ಗೋವುಗಳನ್ನು ಗೋಮಾತೆ ಎಂದು ಪೂಜಿಸುವ ಲಕ್ಷಗಟ್ಟಲೆ ಜನರಿದ್ದಾರೆ. ಗೋವುಗಳ ಸೇವೆ ಪುಣ್ಯದ ಕೆಲಸವೆನ್ನುವ ಭಾವನೆ ನಮ್ಮಲ್ಲಿದೆ. ಈ ಯೋಜನೆಯಿಂದ ಗೋಶಾಲೆ ಹಾಗೂ ಗೋವುಗಳ ನಿರ್ವಹಣೆ ಸಾಧ್ಯವಾಗಲಿದೆ. ವಯಸ್ಸಾದ ಗೋವುಗಳ ನಿರ್ವಹಣೆಗೆ ಪರಿಹಾರ ಒದಗಿಸುವ ಸಕಾರಾತ್ಮಕ ಚಿಂತನೆಯಿಂದ ಈ ಯೋಜನೆಯನ್ನು ಸರ್ಕಾರ ರೂಪಿಸಿದೆ. ಆದರೆ ಸಾರ್ವಜನಿಕರಿಂದ ಈ ಯೋಜನೆಗೆ ಸದ್ಯಕ್ಕಂತೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ.
ಪುಣ್ಯ ಕೋಟಿಗೆ ಸಿಗದ ನಿರೀಕ್ಷಿತ ಸ್ಪಂದನೆ:ಬಹಳ ನಿರೀಕ್ಷೆಯೊಂದಿಗೆ ಜಾರಿ ಮಾಡಲಾಗಿದ್ದ ಪುಣ್ಯಕೋಟಿ ದತ್ತು ಯೋಜನೆಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಯೋಜನೆ ಜಾರಿಯಾಗಿ ಎರಡು ತಿಂಗಳು ದಾಟಿದೆ. ಆದರೆ, ಆರಂಭದಲ್ಲಿ ನಿರೀಕ್ಷಿಸಿದಷ್ಟು ಹಸುಗಳನ್ನು ದತ್ತು ಪಡೆಯಲು ಜನರು ಮುಂದೆ ಬಂದಿಲ್ಲ.