ಬೆಂಗಳೂರು: ಆಶ್ರಮದ ಭಕ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಲ್ಲಿ ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮಿಗೆ ನೀಡಿದ್ದ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿದೆ. ವಿವಾದಿತ ಸ್ವಾಮೀಜಿ ಇದೀಗ ಬಂಧನದ ಭೀತಿಗೆ ಒಳಗಾಗಿದ್ದಾರೆ.
ನಿತ್ಯಾನಂದ ಸ್ವಾಮಿಗೆ ಬಂಧನ ಭೀತಿ: ಹೈಕೋರ್ಟ್ ನೀಡಿದ್ದ ಜಾಮೀನು ರದ್ದು - ನಿತ್ಯಾನಂದ ಸ್ವಾಮೀಜಿ
ಆಶ್ರಮದ ಭಕ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಲ್ಲಿ ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮೀಜಿಗೆ ನೀಡಿದ್ದ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿದೆ. ವಿವಾದಿತ ಸ್ವಾಮೀಜಿ ಇದೀಗ ಬಂಧನದ ಭೀತಿಗೆ ಒಳಗಾಗಿದ್ದಾರೆ.
ಆರೋಪಿ ನಿತ್ಯಾನಂದ ಸ್ವಾಮೀಜಿಗೆ 2010ರಲ್ಲಿ ನೀಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಪ್ರಕರಣದ ಮೂಲ ದೂರುದಾರ ಕುರುಪ್ಪನ್ ಲೆನಿನ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕ ಸದಸ್ಯ ಪೀಠ ಬುಧವಾರ ಪ್ರಕಟಿಸಿದೆ. ಷರತ್ತು ಉಲ್ಲಂಘನೆ ಆಧಾರದ ಮೇಲೆ ಜಾಮೀನು ರದ್ದುಗೊಳಿಸಿ ಆದೇಶಿಸಿದೆ. ಇದೇ ವೇಳೆ ಆರೋಪಿ ಜಾಮೀನು ಪಡೆದುಕೊಳ್ಳುವ ಸಂದರ್ಭದಲ್ಲಿ ನೀಡಿದ್ದ ಶ್ಯೂರಿಟಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ ಸ್ವಾಮೀಜಿ 2018ರ ಜೂನ್ 5 ರಂದು ರಾಮನಗರದ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆ ಬಳಿಕ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆ ಪ್ರಕ್ರಿಯೆಗೆ ಹಾಜರಾಗುವುದರಿಂದ ನಿತ್ಯಾನಂದ ಸ್ವಾಮೀಜಿಗೆ ವಿನಾಯಿತಿ ನೀಡಲಾಗಿತ್ತಾದರೂ ಅವರು ದೇಶ ಬಿಟ್ಟು ಹೋಗಲು ಅನುಮತಿಸಿರಲಿಲ್ಲ. ಇದೀಗ ಆರೋಪಿ ಅವಧಿ ಮುಗಿದ ಪಾಸ್‌ಪೋರ್ಟ್ ಬಳಸಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಹೀಗಾಗಿ ಆರೋಪಿತ ಸ್ವಾಮೀಜಿಗೆ ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು.