ಬೆಂಗಳೂರು :ಬಿಹಾರ ಮುಖ್ಯಮಂತ್ರಿ ಆಯ್ಕೆ ಗೊಂದಲಕ್ಕೆ ತೆರೆ ಬೀಳುತ್ತಿದ್ದಂತೆ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನಾಲ್ಕೈದು ದಿನದಲ್ಲಿ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗ್ತಿದೆ.
ಬಿಹಾರ ಚುನಾವಣೆಯಲ್ಲಿ ವರಿಷ್ಠರು ಬ್ಯುಸಿಯಾಗಿದ್ದು, ಮುಖ್ಯಮಂತ್ರಿ ಆಯ್ಕೆ ಕುರಿತ ಗೊಂದಲ ನಿವಾರಣೆಯಲ್ಲಿ ತೊಡಗಿದ್ದಾರೆ. ಇದರಿಂದ ವರಿಷ್ಠರ ಸಂಪರ್ಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಸಾಧ್ಯವಾಗಿರಲಿಲ್ಲ. ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲು ಸಮಯಾವಕಾಶ ಸಿಕ್ಕಿದ್ದು, ದೆಹಲಿಗೆ ತೆರಳಲು ಯಡಿಯೂರಪ್ಪ ಉತ್ಸುಕರಾಗಿದ್ದಾರೆ.
ಇಂದು ಬಿಹಾರ ಮುಖ್ಯಮಂತ್ರಿ ಹೆಸರು ಅಂತಿಮಗೊಳಿಸಲು ಎನ್‌ಡಿಎ ಸಭೆ ನಡೆಸಿದ್ದು, ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ವಾಹಿನಿಗಳ ವೀಕ್ಷಣೆಯಲ್ಲಿ ತೊಡಗಿದ್ದರು. ಬಿಹಾರ ರಾಜಕೀಯ ವಿದ್ಯಮಾನವನ್ನು ಕುತೂಹಲದಿಂದ ವೀಕ್ಷಿಸಿದರು. ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಹೆಸರನ್ನೇ ಪುನರಾಯ್ಕೆ ಮಾಡಿದ್ದರಿಂದ, ಅಲ್ಲಿನ ರಾಜಕೀಯ ಗೊಂದಲಕ್ಕೆ ತೆರೆ ಬಿದ್ದಿದೆ. ಇದರಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಖುಷಿಯಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ನಾಯಕರ ಭೇಟಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮತಿ ಕೋರಲಿದ್ದು, ಸಚಿವರಾಗಲಿರುವ ಪಟ್ಟಿಯೊಂದಿಗೆ ನಾಲ್ಕೈದು ದಿನದಲ್ಲಿ ದೆಹಲಿಗೆ ತೆರಳಲಿದ್ದಾರೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಜೆ.ಪಿ ನಡ್ಡಾ ಸೇರಿದಂತೆ ಬಿಜೆಪಿ ನಾಯಕರನ್ನು ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಲಿದ್ದು, ಸಂಪುಟ ಸರ್ಜರಿಗೆ ಅನುಮತಿ ಪಡೆದುಕೊಂಡು ಬರಲಿದ್ದಾರೆ ಎನ್ನಲಾಗಿದೆ.