ಬೆಂಗಳೂರು:ನಿರ್ಭಯಾ ಟೆಂಡರ್ ಪ್ರಕರಣ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ಶೀತಲ ಸಮರ ನಡೆಯುತ್ತಿದ್ದು, ಇದರ ಬಗ್ಗೆ ಹೆಚ್ಚುವರಿ ಆಯುಕ್ತ ಹೇಮಂತ್ ನಿಂಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ಮೂರು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ನಿರ್ಭಯಾ ಸೇಫ್ ಟೆಂಡರ್ ಪ್ರಕರಣ ಸಂಬಂಧ ಹರಿದಾಡುತ್ತಿರುವ ವಿಚಾರಗಳ ಬಗ್ಗೆ ಟೆಂಡರ್ ಇನ್ವೈಟ್ ಕಮಿಟಿ ಚೇರ್ಮನ್ ಆಗಿ ಇಂದಿಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದರು.
ನಿರ್ಭಯಾ ಸೇಫ್ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ; ಐಪಿಎಸ್ ನಿಂಬಾಳ್ಕರ್ ಸ್ಪಷ್ಟನೆ ಕಳೆದ ಎರಡು ಮೂರು ದಿನಗಳಿಂದ ಕೆಲವೊಂದು ಆಪಾದನೆಗಳು ಕೇಳಿ ಬಂದಿವೆ. ಈ ಟೆಂಡರ್ಗೆ ಮೂರು ಕಂಪನಿಗಳು ಪ್ರಿ ಕ್ವಾಲಿಫಿಕೇಶನ್ನಲ್ಲಿ ಸೆಲೆಕ್ಟ್ ಆಗಿವೆ. ಈ ಟೆಂಡರ್ ಸಂಬಂಧ ಸರ್ಕಾರದ ಮಟ್ಟದಲ್ಲಿ ಮೂರು ಕಮಿಟಿಗಳಿವೆ. ನಾನು ಬರೆದಿದ್ದ ಲೆಟರ್ ಆಚೆ ಬಂದ ಮೇಲೆ ಇದು ದೊಡ್ಡ ಸದ್ದು ಆಗಿದೆ ಎಂದು ನಿಂಬಾಳ್ಕರ್ ಹೇಳಿದರು.
ಟೆಂಡರ್ನಲ್ಲಿ ನಾನು BEL ಕಂಪನಿಯನ್ನು ತಿರಸ್ಕರಿಸಿದ್ದೇನೆ ಎಂದು ಹೇಳಲಾಗಿದೆ. ಆದರೆ ಆ ಕಂಪನಿ ಇಲ್ಲಿ ಬಿಡ್ ಮಾಡಿಯೇ ಇಲ್ಲ. ಜೂನ್ 20 ರಂದು ಟೆಂಡರ್ ಸ್ಕ್ರುಟಿನಿ ಕಂಪನಿ ಮೂರು ಕಂಪನಿಗಳನ್ನು ಫೈನಲೈಜ್ ಮಾಡಿತ್ತು. ಅದರಲ್ಲಿ BEL ಕೂಡ ಇತ್ತು. ಇದು ಕಾಲ್ 2 ನಲ್ಲಿ ನಡೆದಿರುವ ಪ್ರಕ್ರಿಯೆ. ಆದರೆ ಕಾಲ್ 2 ಅನ್ನು ಕ್ಯಾನ್ಸಲ್ ಮಾಡಲಾಗಿತ್ತು. ಚೀನಾ ವಸ್ತುಗಳನ್ನು ತಿರಸ್ಕರಿಸಿ ಆದೇಶವಾಗಿದ್ದರಿಂದ ಇದು ಕ್ಯಾನ್ಸಲ್ ಆಗಿತ್ತು ಎಂದು ಅವರು ನುಡಿದರು.
ತದನಂತರ ಕಾಲ್ 3 ನವೆಂಬರ್ನಲ್ಲಿ ಮಾಡಲಾಗಿತ್ತು. ಅದು ಸದ್ಯ ಚಾಲ್ತಿಯಲ್ಲಿದ್ದು, ಎಂಟನೇ ತಾರೀಖಿನವರೆಗೂ ಚಾಲ್ತಿಯಲ್ಲಿರುತ್ತದೆ. ಇಲ್ಲಿ ಯಾರು ಬೇಕಾದರೂ ಬಿಡ್ ಮಾಡಬಹುದು. ಈ ಬಿಡ್ಡಿಂಗ್ ಶಿಸ್ತುಬದ್ದವಾಗಿ ವಿವಿಧ ರೀತಿಯ ಸಮಿತಿಗಳ ಅಡಿಯಲ್ಲಿ ತುಂಬಾ ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇದರಲ್ಲಿ ಗೊಂದಲ ಇರಲ್ಲ. ಇದು ತುಂಬಾ ದೀರ್ಘವಾಗಿ ನಡೆಯುವ ಪ್ರಕ್ರಿಯೆ ಎಂದು ಅವರು ತಿಳಿಸಿದರು.
ಹಾಗೆ ನಾನು ಬರೆದ ಲೆಟರ್ ವೈರಲ್ ಆಗಿದ್ದನ್ನು ಪರಿಗಣಿಸಿ ಈಗಾಗಲೇ ಸಮಿತಿ ರಚನೆ ಆಗಿದೆ. ಹೀಗಾಗಿ ನಾನು ಆ ವಿಚಾರ ಮಾತಾಡಲ್ಲ. ಹಾಗೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡ್ತಾರಂತೆ. ಆ ರೀತಿ ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿದೆ. ವೈಯಕ್ತಿಕ ದ್ವೇಷಗಳಿಗೆ ನಾನು ಉತ್ತರ ಕೊಡುವುದು ಸಮಂಜಸವಲ್ಲ. ಅದಕ್ಕೆ ತನಿಖಾ ಕಮಿಟಿ ಆಗಿದೆ. ಕಮಿಟಿ ನಿರ್ಧಾರ ಮಾಡುತ್ತೆ ಎಂದು ಹೇಮಂತ್ ನಿಂಬಾಳ್ಕರ್ ಸ್ಪಷ್ಟಪಡಿಸಿದರು.